ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಒಂದು ಲೀಟರ್ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ಮೇಲೆ 30,041 ಅಕ್ಷರಗಳಿಂದ DON'T USE PLASTIC ಎಂದು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
1,829 ಬಾರಿ DON'T USE PLASTIC ಎಂದು ಬರೆದಿದ್ದಾನೆ, 595 ಸಲ INDIA, 292 ಸಲ WORLD ಎಂದು ಬರೆದಿದ್ದಾನೆ. ವೃತ್ತಿಯಲ್ಲಿ ವ್ಯಕ್ತಿ ಮತ್ತು ವಿಕಸನ ತರಬೇತುದಾರನಾಗಿರುವ ಜೊತೆಗೆ ಅಂತಾರಾಷ್ಟ್ರೀಯ ಯೋಗಾಪಟುವಾಗಿದ್ದು, ಈತನ ಸಾಧನೆಗೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಆಯ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಯುವಕನ ಜಾಗೃತಿ ಈ ಬಗ್ಗೆ ಮಾತನಾಡಿರುವ ಸಾಧಕ ಶಿವಕುಮಾರ್, ನಾನು ಯಾವುದೇ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಈ ರೀತಿ ಬಾಟಲ್ ಮೇಲೆ ಬರೆದಿಲ್ಲ. ಜೊತೆಗೆ ನಾನು ಸಹ ಸಂಪೂರ್ಣವಾಗಿ ಪ್ಲ್ಯಾಸ್ಟಿಕ್ ಬಳಕೆ ಮಾಡುವುದನ್ನ ನಿಲ್ಲಿಸಲಾಗದೆ ಮನನೊಂದು ಈ ರೀತಿ ಬರೆದು ಜನಜಾಗೃತಿ ಮೂಡಿಸಿದ್ದೇನೆ ಅಷ್ಟೇ ಎನ್ನುತ್ತಾರೆ.
ಇದರಿಂದಾಗಿ ದೇಶದ ಜನರು ಮುಂದೆ ಪ್ಲ್ಯಾಸ್ಟಿಕ್ ಬಳಕೆ ಮಾಡುವುದನ್ನ ಸಂಪೂರ್ಣವಾಗಿ ನಿಲ್ಲಿಸಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದಾಗಿ ನಮ್ಮ ಸುತ್ತಮುತ್ತಲ ಪರಿಸರ, ವಾತಾವರಣ ಕೆಡಲಿದೆ. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದಾಗಿ ನಮ್ಮ ಆರೋಗ್ಯ ಸಂಪೂರ್ಣವಾಗಿ ಹಾಳಾಗಲಿದೆ. ಹಾಗಾಗಿ ದೇಶದ ಜನರೇ ಸ್ವಯಂ ಪ್ರೇರಿತರಾಗಿ ಪ್ಲ್ಯಾಸ್ಟಿಕ್ ಬಳಸುವುದನ್ನ ನಿಲ್ಲಿಸಬೇಕೆಂದು ಮನವಿ ಮಾಡುತ್ತೇನೆ ಎನ್ನುತ್ತಾರೆ.
ಇನ್ನು ಶಿವಕುಮಾರ್ ಸಾಧನೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಗ್ರಾಮದ ಯುವಕನ ಸಾಧನೆ ಬಗ್ಗೆ ಹೆಮ್ಮೆ ಇದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡ ಪ್ಲಾಸ್ಟಿಕ್ ಉತ್ಪಾದನೆಯನ್ನೇ ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಮನವಿ ಮಾಡಿದ್ದಾರೆ.