ರಾಮನಗರ: ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸೇವೆಯಿಂದ ನಿವೃತ್ತಿಯಾಗಿದ್ದರೂ ಅವರ ಪರಿಸರ ಕಾಳಜಿ ಮಾತ್ರ ನಿಂತಿಲ್ಲ. ಬಂದ ಪಿಂಚಣಿ ಹಣದಲ್ಲಿ ಪರಿಸರಕ್ಕಾಗಿ ಲಕ್ಷಾಂತರ ರೂ ಹಣ ಖರ್ಚು ಮಾಡಿದ್ದಾರೆ. ಹೌದು, ಇವರ ಹೆಸರು ಭೂಹಳ್ಳಿ ಪುಟ್ಟಸ್ವಾಮಿ. ತಮ್ಮ 9ನೇ ವಯಸ್ಸಿನಿಂದಲೇ ಬೆಳೆಸಿಕೊಂಡಿರುವ ಪರಿಸರ ಪ್ರೇಮದಿಂದ ಪ್ರಾಣಿ-ಪಕ್ಷಿಗಳಿಗೆ ಸುಂದರ ವನ ಬೆಳೆಸಿ ಆಶ್ರಯ ನೀಡಿದ್ದಾರೆ.
ಬರಡು ಭೂಮಿಯಾಗಿದ್ದ ಜಾಗದಲ್ಲಿ ಸುತ್ತಲೂ ಬೆಳೆದಿರುವ ಮರ ಗಿಡಗಳು. ಪ್ರತಿ ನಿತ್ಯ ಇದೇ ಜಾಗದಲ್ಲಿ ಪ್ರಾಣಿ ಪಕ್ಷಿಗಳು ಬಂದು ಆಶ್ರಯ ಪಡೆಯುತ್ತವೆ. ಈ ಸುಂದರ ವನ ನಿರ್ಮಾಣ ಮಾಡಲು ಶ್ರಮಪಟ್ಟಿರುವುದು ಭೂಹಳ್ಳಿ ಪುಟ್ಟಸ್ವಾಮಿ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮದವರಾದ ಪುಟ್ಟಸ್ವಾಮಿ 32 ವರ್ಷಗಳ ಕಾಲ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿ ನಂತರವೂ ಸೇವೆ ಮುಂದುವರಿಸಿರುವ ಇವರು ಲಕ್ಷಾಂತರ ರೂ. ಖರ್ಚು ಮಾಡಿ ಬರೋಬ್ಬರಿ 12ಕ್ಕೂ ಹೆಚ್ಚು ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ 3 ಎಕರೆ ಪ್ರದೇಶದಲ್ಲಿ ಇವರು 'ಕವಿವನ' ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡ ಮರಗಳು ಬೆಳೆದು ಬರಡಾಗಿದ್ದ ಪ್ರದೇಶ ಇಂದು ಅರಣ್ಯವಾಗಿದೆ.
ಪಕ್ಷಿ ಸಂಕುಲದ ಉಳಿವಿಗೆ ಪಣ: ಕವಿವನ ಹಲವು ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದೆ. ಪಕ್ಷಿಗಳಿಗೆ ಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಹೀಗೆ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಪಕ್ಷಿ ಸಂಕುಲದ ಉಳಿವಿಗೆ ಪಣ ತೊಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ಆಕರ್ಷಣೆ ಎಂದರೆ, 11 ಅಡಿ ಎತ್ತರದ ಬುದ್ಧೇಶ್ವರ ಪ್ರತಿಮೆಯನ್ನು ಇಟ್ಟಿದ್ದಾರೆ.