ರಾಮನಗರ :ಜಿಲ್ಲೆಯ ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದೆ.
ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದೆ. ನೀರಿನ ರಭಸಕ್ಕೆ ಶವದ ಕೆಲವು ಅಂಗಾಂಗಗಳು ಶನಿವಾರ ಪೈಪ್ ಮೂಲಕ ಕೆಳಗೆ ಬಂದಿವೆ. ವಿಷಯ ತಿಳಿದ ಕೂಡಲೇ ಟ್ಯಾಂಕ್ನಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಸದ್ಯ ಪೈಪುಗಳನ್ನು ಕತ್ತರಿಸಿ ದೇಹದ ಅಂಗಾಂಗಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಅಧಿಕಾರಿಗಳೊಂದಿಗೆ ಹೆಚ್‌ಡಿಕೆ ಮಾತುಕತೆ
ವಿಷಯ ತಿಳಿಯುತ್ತಿದ್ದಂತೆ ಚನ್ನಪಟ್ಟಣದ ಶಾಸಕ ಹೆಚ್ ಡಿ ಕುಮಾರಸ್ವಾಮಿ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಶವವನ್ನು ಸಂಪೂರ್ಣ ಹೊರ ತೆಗೆದು ಟ್ಯಾಂಕ್ ಅನ್ನು ಸ್ವಚ್ಛಗೊಳಿಸಬೇಕು. ಅಲ್ಲಿಯವರೆಗೆ ಈ ಟ್ಯಾಂಕ್ ನೀರು ಸರಬರಾಜು ಆಗುತ್ತಿದ್ದ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದ್ದಾರೆ.
ನೀರು ಪೂರೈಕೆ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಶಾಸಕ ಹೆಚ್‌ಡಿಕೆ ಸೂಚಿಸಿರುವ ಬಗ್ಗೆ ಹೇಳಿಕೆ ನೀಡಿರುವುದು.. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅದೇ ರೀತಿ ನಗರಸಭೆ ಅಧಿಕಾರಿಗಳ ಜತೆಗೂ ಮಾತನಾಡಿ, ಜನರ ಕುಡಿಯುವ ಮತ್ತು ದಿನಬಳಕೆ ನೀರಿನ ಪರ್ಯಾಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ ಎಂದರು.
ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಅದರ ಸ್ವಚ್ಛತೆ ಖಾತರಿಪಡಿಸಿಕೊಂಡ ನಂತರ ಅಧಿಕಾರಿಗಳು ಅಧಿಕೃತವಾಗಿ ಹೇಳುವ ತನಕ ಯಾರೂ ಆ ಟ್ಯಾಂಕಿನ ನೀರನ್ನು ಬಳಸಬಾರದು ಎಂದು ಜನರಲ್ಲಿ ಹೆಚ್‌ಡಿಕೆ ಅವರು ಮನವಿ ಮಾಡಿದ್ದಾರೆ.