ರಾಮನಗರ : ಜಮೀನು ವಿವಾದದ ಹಿನ್ನೆಲೆ ವೃದ್ದೆಯೊಬ್ಬರ ಮೇಲೆ ಗಂಭೀರ ಹಲ್ಲೆ ಮಾಡಿ ಸಾವಿಗೆ ಕಾರಣವಾಗಿದ್ದ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ದಂಡ ವಿಧಿಸಿ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ತಾಲ್ಲೂಕಿನ ಎಂ.ಗೋಪಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಸಂಬಂಧ ಆರೋಪಿಗಳಾದ ಜಿ.ಎಚ್. ಲೋಕೇಶ್ ಹಾಗೂ ಹುಲಿಯಪ್ಪ ಎಂಬುವವರು 2013ರ ಸೆಪ್ಟೆಂಬರ್ 10 ರಂದು ಕುಮಾರ್ ಎಂಬುವರ ತಾಯಿ ಪುಟ್ಟಮ್ಮ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಪುಟ್ಟಮ್ಮ ಚಿಕಿತ್ಸೆ ಫಲಕಾರಿಯಾಗದೇ 2013ರ ಸೆಪ್ಟೆಂಬರ್ 19 ರಂದು ಸಾವನ್ನಪ್ಪಿದ್ದರು.
ಗೋಪಳ್ಳಿ ವೃದ್ಧೆ ಹತ್ಯೆ ಪ್ರಕರಣ ತೀರ್ಪು: ಪ್ರಕರಣದ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ದೂರು ದಾರರ ಪರ ಸರ್ಕಾರಿ ಅಭಿಯೋಜಕರಾದ ವಿ.ಶ್ರೀರಾಮ ಅವರು ವಾದ ಮಂಡಿಸಿದ್ದರು.
ಸಾಕ್ಷ್ಯಾದಾರಗಳನ್ನು ಪರಾಮರ್ಶಿಸಿದ 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಪ್ರಕರಣದ ಮೊದಲ ಅಪರಾಧಿ ಜಿ.ಎಚ್.ಲೋಕೇಶ್ ಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. 2ನೇ ಆರೋಪಿ ಹುಲಿಯಪ್ಪ ಮೃತ ಪಟ್ಟ ಹಿನ್ನೆಲೆ ಆತನನ್ನು ಪ್ರಕರಣದಿಂದ ವಿಮುಕ್ತಿಗೊಳಿಸಲಾಗಿದೆ.