ರಾಮನಗರ :ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಆಚರಣೆಗೆ ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಕನಕಪುರ ತಾಲೂಕಿನ ಸಂಗಮ ಮಾರ್ಗವಾಗಿ ತೆರಳುತ್ತಿದ್ದ ಭಕ್ತರಲ್ಲಿ ಕೆಲವರು ಕಾವೇರಿ ನದಿ ದಾಟುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಸಂಗಮದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯ ಗುರುತು ಇನ್ನೂ ತಿಳಿದು ಬಂದಿಲ್ಲ. ಸಾವಿರಾರು ಭಕ್ತರು ಶುಕ್ರವಾರ ದೊಡ್ಡ ಆಲಹಳ್ಳಿ ಏಳಗಳ್ಳಿ ಹೆಗ್ಗನೂರು ಮೂಲಕ ಸಂಗಮದ ಬಳಿ ಕಾವೇರಿ ನದಿ ದಾಟುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ದುರಂತ ಸಂಭವಿಸಿದೆ ಎನ್ನಲಾಗಿದೆ. ನಿನ್ನೆ ಓರ್ವ ಮಹಿಳೆಯ ಶವ ಪತ್ತೆಯಾಗಿತ್ತು.
ಇದನ್ನೂ ಓದಿ: ಕಾವೇರಿ ನದಿ ದಾಟುವ ವೇಳೆ ದುರಂತ : ಹಲವು ಭಕ್ತರು ಕೊಚ್ಚಿಕೊಂಡು ಹೋಗಿರುವ ಶಂಕೆ
ಘಟನೆಯಲ್ಲಿ ಹಲವರನ್ನು ರಕ್ಷಿಸಲಾಗಿದ್ದು, ಮತ್ತಷ್ಟು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ಇದೆ. ಶವಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ರಾಮನಗರ ಜಿಲ್ಲೆ ಸೇರಿದಂತೆ ಬೆಂಗಳೂರಿನ ನಾನಾ ಭಾಗದಿಂದ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ, ಕನಕಪುರ, ದೊಡ್ಡ ಆಲಹಳ್ಳಿ, ಏಳಗಳ್ಳಿ, ಹೆಗ್ಗನೂರು, ಕುಪ್ಪೆದೊಡ್ಡಿ ಮಾರ್ಗವಾಗಿ ಸಂಗಮ ಬಳಿಯ ಬೊಮ್ಮಸಂದ್ರ ಬಳಿ ಕಾವೇರಿ ನದಿ ದಾಟಿಕೊಂಡು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಾರೆ. ಹಲವು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.