ರಾಮನಗರ : ಕಳೆದ ಕೆಲವು ದಿನಗಳಿಂದ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಚನ್ನಪಟ್ಟಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು. ನಾಲ್ಕು ದಿನಗಳ ಹಿಂದೆ ಕಾರ್ಯಾಚರಣೆಗೆ ಆಗಮಿಸಿದ್ದ ಅಭಿಮನ್ಯು ನೇತೃತ್ವದ ಐದು ಸಾಕಾನೆಗಳ ತಂಡ ಶೋಧ ಕೈಗೊಂಡಿತ್ತು. ಈ ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡಿದ್ದ ಸಲಗವನ್ನು ಇದೀಗ ತೆಂಗಿನಕಲ್ಲು ಅರಣ್ಯ ಪ್ರದೇಶದ ಅರಳಾಳುಸಂದ್ರ ಕಾಡನಕುಪ್ಪೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಬ್ಬರು ರೈತ ಸಾವನ್ನಪ್ಪಿದ್ದರು. ಮಾವಿನ ತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿತ್ತು. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ವೀರಭದ್ರಯ್ಯ ಸಾವನ್ನಪ್ಪಿದ್ದರು.
ವೀರಭದ್ರಯ್ಯ ಅವರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಲೋಕೇಶ್ ಎಂಬವರ ಮಾವಿನ ತೋಟವನ್ನು ಕಾಯುತ್ತಿದ್ದರು. ತೋಟಕ್ಕೆ ಮುಂಜಾನೆ ಆನೆ ದಾಳಿ ನಡೆಸಿದೆ. ದಾಳಿಯಲ್ಲಿ ವೀರಭದ್ರಯ್ಯ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ, ಕಬ್ಬಾಳು ಗ್ರಾಮ ಬಳಿಯೂ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದರು. ಅಂದು ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ ಸೆರೆಗೆ ಆಗಮಿಸಿದ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡದ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಒಂಟಿ ಸಲಗವನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಕಾಡಾನೆಯನ್ನು ತಾತ್ಕಾಲಿಕ ಕ್ಯಾಂಪ್‌ಗೆ ಕರೆತಂದು ಇಂದು ರಾತ್ರಿ ಬೇರೆಡೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.