ರಾಮನಗರ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾ ನಗರದಲ್ಲಿ ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಆನೆ ದಾಳಿ ಮಾಡಿದೆ. ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಯಮ್ಮ (50) ಮೃತ ಮಹಿಳೆ, ವೆಂಕಲಕ್ಷ್ಮಮ್ಮ (45) ಗಂಭೀರವಾಗಿ ಗಾಯಗೊಂಡವರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕನಕಪುರ ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ ಆನೆ ತುಳಿತಕ್ಕೆ ಇಬ್ಬರು ಬಲಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೆ ಒಂಟಿ ಸಲಗ ದಾಳಿ ಮಾಡಿದೆ.
ಇದನ್ನೂ ಓದಿ :ರಾಮನಗರದಲ್ಲಿ ಇಬ್ಬರು ರೈತರ ಬಲಿ ಪಡೆದ ಒಂಟಿ ಸಲಗ ಕೊನೆಗೂ ಸೆರೆ
ಇಬ್ಬರು ರೈತರು ಸಾವು : ಇತ್ತೀಚಿಗೆ ಮಾವಿನ ತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿತ್ತು. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ವೀರಭದ್ರಯ್ಯ ಸಾವನ್ನಪ್ಪಿದ್ದರು. ಇವರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಲೋಕೇಶ್ ಎಂಬುವರ ಮಾವಿನ ತೋಟವನ್ನು ಕಾಯುವ ಕೆಲಸ ಮಾಡುತ್ತಿದ್ದರು. ತೋಟಕ್ಕೆ ಮುಂಜಾನೆ ಆನೆ ದಾಳಿ ನಡೆಸಿದ್ದು, ಈ ವೇಳೆ ವೀರಭದ್ರಯ್ಯ ಸಾವನ್ನಪ್ಪಿದ್ದರು. ಬಳಿಕ, ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ, ಆನೆ ಸೆರೆಗೆ ಅಭಿಮನ್ಯು ನೇತೃತ್ವದ ಸಾಕಾನೆಗಳ ತಂಡವನ್ನು ಕೆರೆತಂದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೂ ಜೂನ್ 8 ರಂದು ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿತ್ತು. ಹಾಗೆಯೇ, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದಲ್ಲಿ ರೈತ ರವಿ (40) ಎಂಬುವರು ಮೃತಪಟ್ಟಿದ್ದರು.
ಇದನ್ನೂ ಓದಿ :ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ : ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ
ದ್ವಿಚಕ್ರ ವಾಹನ ಸವಾರನ ಮೇಲೆ ಆನೆ ದಾಳಿ : ಜೂನ್ 10 ರಂದು ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ಬೈಕ್ ಸವಾರನ ಮೇಲೆ ದಾಳಿ ಮಾಡಿ ಬೈಕ್ ಜಖಂ ಮಾಡಿತ್ತು. ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ದ್ವಿಚಕ್ರ ಸವಾರನ ಮೇಲೆ ಮರಿಯಾನೆ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಭಯಭೀತನಾದ ವ್ಯಕ್ತಿ, ತಮ್ಮ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಆನೆ ಬೈಕ್ ತುಳಿಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿತ್ತು.
ಕಾಡಾನೆ ದಾಳಿಗೆ ಮಹಿಳೆ ಬಲಿ :ಇನ್ನು ಮೇ 27 ರಂದು ಆನೇಕಲ್ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಂಚಿನಲ್ಲಿರುವ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಪರಿಣಾಮ, ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಉದ್ಯಾನದ ಸಿಬ್ಬಂದಿ ಕುಮಾರ್ ಎಂಬುವರ ತಾಯಿ ನಾಗಮ್ಮ (50) ಮೃತರು.