ರಾಮನಗರ:ರೇಷ್ಮೆನಗರಿ ರಾಮನಗರದಲ್ಲಿ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟನಾನುಘಟಿಗಳ ಸ್ಪರ್ಧೆಯಿಂದ ಅಖಾಡದ ಕುತೂಹಲದ ಕಣಜವಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರ ಓಡಾಟವೇ ಹೆಚ್ಚು ಕಂಡು ಬಂದಿದ್ದು, ಪತಿರಾಯರ ಪರವಾಗಿ ಕಣಕ್ಕೆ ಇಳಿದಿರುವ ಮಡದಿಯರು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರ ನಡೆಸಿದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪತ್ನಿ ಶೀಲಾ ಯೋಗೇಶ್ವರ್ ಪ್ರಚಾರ ನಡೆಸಿದರು. ಅತ್ತ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರವಾಗಿ ಪತ್ನಿ ಉಷಾ ಮತಯಾಚನೆ ಮಾಡಿದರು. ಮಾಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಪರವಾಗಿ ಅವರ ಮಡದಿ ರಾಧಾ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರವಾಗಿ ಲಕ್ಷ್ಮಿ ಅವರು ಮನೆಮನೆಗೆ ತೆರಳಿ ಮತದಾರರನ್ನು ಭೇಟಿ ತಮ್ಮ ಪತಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.
ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ವಾರವಷ್ಟೇ ಬಾಕಿ ಉಳಿದಿದೆ. ಹೀಗಾಗಿ ಮತದಾರರ ಮನೆ – ಮನ ತಲುಪಲು ಅಭ್ಯರ್ಥಿಗಳ ಜೊತೆಗೆ ಅವರ ಪತ್ನಿಯರೂ ಮತಯಾಚನೆಯಲ್ಲಿ ತೊಡಗಿದ್ದಾರೆ. ಗಂಡನ ಪಾಲಿಗೆ ಮಡದಿಯೇ ಸ್ಟಾರ್ ಪ್ರಚಾರಕರಾಗಿ ಮತಯಾಚನೆ ನಡೆಸುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಅನಿತಾ ಝಲಕ್:ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದ ಕಣದಲ್ಲಿದ್ದಾರೆ. ಹೆಚ್‌ಡಿಕೆ ರಾಜ್ಯ ಪ್ರವಾಸದಲ್ಲಿ ತೊಡಗಿಸಿಕೊಂಡಿರುವ ಕಾರಣ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಸ್ಪರ್ಧಿಸಿರುವ ರಾಮನಗರದ ಜೊತೆಗೆ ಪತಿಯ ಚನ್ನಪಟ್ಟಣ ಕ್ಷೇತ್ರದ ಪ್ರಚಾರದ ಉಸ್ತುವಾರಿಯನ್ನು ತೆಗೆದುಕೊಂಡಿದ್ದಾರೆ.
ಅನಿತಾ ಅವರಿಗೆ ಚನ್ನಪಟ್ಟಣ ರಾಜಕಾರಣ ಹೊಸತೇನೂ ಅಲ್ಲ. 2013ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಹೋಬಳಿ, ಬೂತ್ ಮಟ್ಟದಲ್ಲಿ ಸಭೆಗಳನ್ನು ಸಂಘಟಿಸುತ್ತಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.