ರಾಮನಗರ: ನಮ್ಮ ಪಕ್ಷದಿಂದ ಇದುವರೆಗೆ ನಾವು ಯಾರ ಮನೆ ಬಾಗಿಲಿಗೂ ಹೊಂದಾಣಿಕೆ ಮಾಡಿಕೊಳ್ಳಲು ಹೋಗಿಲ್ಲ. ಅವರಿಗೆ ಬೇಕಾದಾಗ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಕಾಲು ಹಿಡಿದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಪಪಡಿಸಿದರು.
ಉತ್ತರ ಪ್ರದೇಶ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಂಜೆ ಎಕ್ಸಿಟ್ ಪೋಲ್ ಇದೆ. ಅದರ ಅನಾಲಿಸಿಸ್ ಮತ್ತು 10 ರಂದು ಫಲಿತಾಂಶ ಇದೆ. ಇದನ್ನು ನೋಡಿಕೊಂಡು ಮುಂದೆ ಆಗುವ ರಾಜಕೀಯ ಬೆಳವಣಿಗೆಯನ್ನು ಕಾದು ನೋಡೋಣ ಎಂದರು.
ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಎಂದು ನಾನು ಅವರ ಜೊತೆ ಕೈ ಜೋಡಿಸಲಿ?. ಸ್ವಾತಂತ್ರ್ಯವಾಗಿ ಮುಂದಿನ ಚುನಾವಣೆಯನ್ನು ಜೆಡಿಎಸ್ ಎದುರಿಸಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಒಂದು ಸ್ಥಾನ ಹೆಚ್ಚೇ ಇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ: ಮುನ್ನೋಟ ಇಲ್ಲದ ಬಜೆಟ್ ಮಂಡನೆ: ಕಲಾಪದಲ್ಲಿ ಸಿದ್ದರಾಮಯ್ಯ ಕೆಂಡ
ಚನ್ನಪಟ್ಟಣ ತಾಲೂಕು ಅಭಿವೃದ್ಧಿಗೆ ಯೋಗೇಶ್ವರ್ 50 ಕೋಟಿ ರೂ. ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಅದು ರಾಜ್ಯದ ತೆರಿಗೆ ದುಡ್ಡು. ಅವರ ಕೈಯಿಂದ ಹಾಕುತ್ತಿಲ್ಲ. ಹೊಸ ರೀತಿ ತರಲು ಹೋಗಿದ್ದಾರೆ. ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೋ ಅಥವಾ ಕಾರ್ಯಕರ್ತರಿಗೆ ಕಳ್ಳ ಬಿಲ್ಲು ಮಾಡಿಸಿ ಅವರನ್ನು ಉಳಿಸಲೋ ಎಂಬುದರ ಬಗ್ಗೆ ಸ್ಪಷ್ಟೀಕರಣ ಕೊಡಲಿ ಎಂದು ಮಾಜಿ ಸಚಿವ ಯೋಗೇಶ್ವರ್ ವಿರುದ್ಧ ಹೆಚ್ಡಿಕೆ ಗುಡುಗಿದರು.