ರಾಮನಗರ: ಭಿನ್ನಾಭಿಪ್ರಾಯ ಮರೆತು ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅನಿತಾ ಕುಮಾರಸ್ವಾಮಿ ತಿಳಿಸಿದರು.
ನಗರದ ಮಂಜುನಾಥ ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮೈತ್ರಿ ಧರ್ಮ ಪಾಲನೆ ಮಾಡಿದರೆ ಅವರಿಂದಲೂ ನಾವು ನಿರೀಕ್ಷಿಸಬಹುದು. ಅದು ಮಂಡ್ಯ ಕ್ಷೇತ್ರದಲ್ಲಿಯೂ ಪ್ರಭಾವ ಬೀರಲಿದೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ಹತ್ತಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ದಿಢೀರ್ ಜೊತೆಗೂಡುವ ಸನ್ನಿವೇಶ ಬಂದಿದೆ. ಕಷ್ಟವಾದರೂ ದೇಶದ ಹಿತದೃಷ್ಟಿಯಿಂದ ಒಂದಾಗಬೇಕಿದೆ. ಕಳೆದ ಚುನಾವಣೆಯಿಂದ ಹೊಂದಾಣಿಕೆ ಮೂಲಕ ರಾಜ್ಯಕ್ಕೆ ಹೊಸ ಸಂದೇಶ ಹಾಗೂ ಹೆಸರು ತಂದು ಕೊಟ್ಟ ಹೆಗ್ಗಳಿಕೆ ಇದೆ. ಅನಿತಾ ಕುಮಾರಸ್ವಾಮಿ ಅವರು ಕಳೆದ ಚುನಾವಣೆಯಲ್ಲಿ ದಾಖಲೆ ಮಾಡಿದ್ದಾರೆ. ಅದನ್ನ ಮುರಿಯೋದು ಸಾಧ್ಯವೇ ಇಲ್ಲಾ. ಒಂದು ಮನೆಯಲ್ಲಿಯೇ ಎಲ್ಲರೂ ಒಂದೇ ತರ ಇರಲ್ಲ. ಆದ್ದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಕೆಲಸ ಮಾಡೋಣ. ಚನ್ನಪಟ್ಟಣ ಹೊರತುಪಡಿಸಿ ಬಿಜೆಪಿ ಎಲ್ಲೂ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.