ಬೆಂಗಳೂರು/ರಾಮನಗರ :ಮೇಕೆದಾಟು ಯೋಜನೆಗೆ ಒತ್ತಾಯಿಸಿ ಶುಕ್ರವಾರ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರ್ ಬ್ಯಾಂಕ್ ವೃತ್ತದಿಂದ ಮೇಕೆದಾಟುವರೆಗೆ ವಾಹನಗಳ ಜಾಥಾಗೆ ಚಾಲನೆ ನೀಡಲಾಯಿತು.
ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ವಾಹನಗಳ ಜಾಥಾ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಕನ್ನಡ ಪರ ಸಂಘಟನೆಗಳ ಮುಖಂಡರು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡ ಪರ ಸಂಘಟನೆಗಳು ಮೇಕೆದಾಟುವಿಗಾಗಿ ದೊಡ್ಡ ಮೆರವಣಿಗೆ ಮಾಡುತ್ತೇವೆ. ಈಗ ಎದುರಾಗಿರುವುದು ಬಹಳ ಗಂಭೀರ ಪರಿಸ್ಥಿತಿ. ಮೇಕೆದಾಟು ಯೋಜನೆ ಯಾವಾಗ ಆರಂಭ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಿಂದ ಮೇಕೆದಾಟುವರೆಗೆ ವಾಹನಗಳ ಜಾಥಾ.. ಕೇಂದ್ರ ಸರ್ಕಾರ ಕನ್ನಡಿಗರನ್ನ ಕಡೆಗಣಿಸುತ್ತಿದೆ. ಕಾವೇರಿ ನೀರಿಗಾಗಿ ರಚಿಸಿರುವ ಪ್ರಾಧಿಕಾರ ಕೂಡ ನಮಗೆ ಒಪ್ಪಿಗೆ ಕೊಡುತ್ತಿಲ್ಲ. ಕರ್ನಾಟಕವನ್ನು ಕಡೆಗಣಿಸುತ್ತಿದೆ. ತಮಿಳುನಾಡು ರಾಜ್ಯಕ್ಕೆ ಬೆಂಬಲ ಕೊಡುತ್ತಿದೆ ಎಂದು ದೂರಿದ ಅವರು, ಯೋಜನಾ ವರದಿ ಸಲ್ಲಿಸಿ 6 ರಿಂದ 7 ವರ್ಷ ಆಯಿತು. ಆದರೆ, ಆ ವರದಿ ಎಲ್ಲಿ ಹೋಯಿತು ಎಂದು ಗೊತ್ತಾಗುತ್ತಿಲ್ಲ. ಪಾರ್ಲಿಮೆಂಟ್ ಸದಸ್ಯರು ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು ಎಂದು ವಾಟಾಳ್ ಆಗ್ರಹಿಸಿದರು.
ಕನ್ನಡ ಪರ ಹೋರಾಟಗಾರರಿಂದಲೇ ಮೇಕೆದಾಟು ಚಳವಳಿ :ಕರ್ನಾಟಕ ಬಂದ್ ಮಾಡಿ ಮೇಕೆದಾಟು ಚಳವಳಿ ಆರಂಭ ಮಾಡಿದ್ದೆ ನಾವು. ಕನ್ನಡ ಪರ ಹೋರಾಟಗಾರರು. ಈ ದೃಷ್ಟಿಯಿಂದ ನೋಡುವುದಾದರೆ ಈ ಹೋರಾಟ ತೀವ್ರವಾಗಿ ನಡೆಯುತ್ತದೆ. ಸಿಎಂ ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಪ್ರಧಾನಿಯನ್ನು ಭೇಟಿ ಮಾಡಿ ಮಾತಾಡಬೇಕು. ಮೇಕೆದಾಟು ಕುಡಿಯುವ ನೀರಿನ ಜೊತೆಗೆ ವಿದ್ಯುಚ್ಛಕ್ತಿಗೆ ಸಹ ನೆರವು ನೀಡುತ್ತದೆ.
ಈ ನಿಟ್ಟಿನಲ್ಲಿ ಕಳಸಾ-ಬಂಡೂರಿ ಮಹದಾಯಿ ಯೋಜನೆಗೂ ಸಹ ನಾವು ಹೋರಾಟ ಮಾಡುತ್ತೇವೆ. ಎಲ್ಲ ಯೋಜನೆಯನ್ನು ಕೇಂದ್ರ ಸರ್ಕಾರ ಮೂಲೆ ಗುಂಪು ಮಾಡಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಯಾರು ಈ ವಿಚಾರ ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷದವರು ಈಗ ಹೋರಾಟ ಮಾಡುತ್ತಿದ್ದಾರೆ, ಅಧಿಕಾರದಲ್ಲಿದ್ದಾಗ ಹೋರಾಟ ಮಾಡಬೇಕಿತ್ತು ಎಂದು ಮಾತಿನ ಚಾಟಿ ಬೀಸಿದರು.
ನಾವು ಶೋ ಮಾಡಲು ಹೊರಟಿಲ್ಲ :ರಾಮನಗರದಲ್ಲಿ ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್, ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾವೇರಿ ಪ್ರಾಧಿಕಾರ ನಮ್ಮ ಬೇಡಿಕೆಯನ್ನ ಐದು ಬಾರಿ ತಳ್ಳಿ ಹಾಕಿದೆ. ಸಿಎಂ ಬೊಮ್ಮಾಯಿ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಕೂಡಲೇ ಬಹಿಷ್ಕಾರ ಹಾಕಬೇಕು ಎಂದರು.
ತಮಿಳುನಾಡಿನ ಪರವಾಗಿ ಕಾವೇರಿ ನಿರ್ವಹಣಾ ಪ್ರಾಧಿಕಾರ ಇದೆ. ಮೇಕೆದಾಟು ಯೋಜನೆಗಾಗಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ತಮಿಳುನಾಡಿನಲ್ಲಿ ಬಿಜೆಪಿಗೆ ಅನುಕೂಲವಾಗಬೇಕು ಎಂದು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಜನವರಿ 19ರಂದು ಚಾಮರಾಜನಗರ ಜಿಲ್ಲೆ ತಮಿಳುನಾಡು ಗಡಿ ಬಂದ್ ಮಾಡುತ್ತೇವೆ.
ವಾಹನಗಳನ್ನ ನಮ್ಮ ರಾಜ್ಯಕ್ಕೆ ಬಿಡುವುದಿಲ್ಲ. ಯಾವುದೋ ಒಂದು ದಿನ ಹೋರಾಟ ಮಾಡಿ ಶೋ ಕೊಡುವುದಲ್ಲ. ನಾವು ಸಾಕಷ್ಟು ವರ್ಷ ಮೇಕೆದಾಟುಗಾಗಿ ಹೋರಾಟ ಮಾಡಿದ್ದೇವೆ. ಮೇಕೆದಾಟು ಯೋಜನೆ ಆಗಲೇಬೇಕೆಂದು ಚಳವಳಿ ಆರಂಭಿಸಿದ್ದೇ ನಾವು. ಆರು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದರು. ಆಗ ಏನು ಮಾಡುತ್ತಿದ್ದರು. ಕೇಂದ್ರದ ಮೇಲೆ ಗಮನ ಸೆಳೆಯಲಿಲ್ಲ ಎಂದು ದೂರಿದರು.