ರಾಮನಗರ:ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು. ರಾಮನಗರದ ಐಜೂರು ವೃತ್ತದಲ್ಲಿ ಮೇಕೆಗಳನ್ನ ರಸ್ತೆಗಿಳಿಸಿ ಮೇಕೆದಾಟು ಯೋಜನೆ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುವ ಮೇಕೆದಾಟು ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ. ಅವರ ಪಾಡಿಗೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಮೇಕೆದಾಟು ಯೋಜನೆ ಆಗಬೇಕೆಂದು ಕಳೆದ ಹಲವು ವರ್ಷಗಳಿಂದಲೂ ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ.
ನಾವು ಮಾಡಿದ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಅವರೇಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ಅದನ್ನ ಬಿಟ್ಟು ಈಗ ರಾಜಕೀಯ ಮಾಡಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ನನ್ನ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ಅವರ ಪಾಡಿಗೆ ಪಾದಯಾತ್ರೆ ಮಾಡಿಕೊಳ್ಳಲಿ. ನಾವು ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆ ಬಗ್ಗೆ ಉಗ್ರ ಚಳವಳಿ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಸಂಸದರ ವಿರುದ್ಧ ವಾಗ್ಧಾಳಿ:
ಸಿಎಂ ಇರುವ ವೇದಿಕೆಯಲ್ಲಿ ಸಚಿವರ ಭಾಷಣಕ್ಕೆ ಸಂಸದರ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಇರುವ ವೇದಿಕೆಯಲ್ಲಿ ಹಾಗೆ ನಡೆದುಕೊಳ್ಳಬಾರದಿತ್ತು. ಯಾರೇ ಆಗಲಿ ವೇದಿಕೆಯಲ್ಲಿ ಮಾತನಾಡುವಾಗ ಆವೇಶದ ಮಾತು ಆಡುವುದು ಸಹಜ. ಅದೇ ರೀತಿ ಸಚಿವರು ಕೂಡ ಆವೇಶದ ಮಾತನ್ನ ಆಡಿರಬಹುದು. ಇದಕ್ಕೆ ವೇದಿಕೆಯಲ್ಲಿ ಮಾತನಾಡಿ ಉತ್ತರ ನೀಡಬೇಕೇ ಹೊರತು ಈ ರೀತಿ ವೀರಾವೇಷದಲ್ಲಿ ನಡೆದುಕೊಂಡಿದ್ದು ಸರಿಯಲ್ಲ. ಕೂಡಲೇ ಸಂಸದ ಡಿ.ಕೆ ಸುರೇಶ್ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಶಾಸಕ ಪ್ರೀತಂಗೌಡ