ರಾಮನಗರ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದ ಯುವಕನನ್ನು ಹತ್ಯೆ ಮಾಡಿರುವ ಘಟನೆ ಸೋಲೂರು ಸಮೀಪದ ಕಂಕೇನಹಳ್ಳಿ ಲಾಯದ ದರ್ಗಾ ಬಳಿ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂ.ಗ್ರಾ. ಜಿಲ್ಲೆ ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಹತ್ಯೆಯಾದ ದುರ್ದೈವಿ ಯುವಕ. ಸದ್ಯ ಪ್ರಕರಣದ ಆರೋಪಿಗಳಾದ ಹುಡುಗಿ ತಂದೆ ನಿಜಾಮುದ್ದೀನ್ ಹಾಗೂ ಸಿಖಂದರ್ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಅನ್ಯಕೋಮಿನ ಹುಡುಗಿ ಪ್ರೀತಿಸಿದ್ದಕ್ಕೆ ಮರ್ಯಾದಾ ಹತ್ಯೆ : ಇಬ್ಬರ ಬಂಧನ ಈ ಸಂಬಂಧ ಮಾಹಿತಿ ನೀಡಿರುವ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹತ್ಯೆ ಸಂಬಂಧ ತನಿಖೆ ಚುರುಕುಗೊಳಿಸಲಾಗಿದ್ದು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದ ನಟರಾಜ್ಗೂ ಬೆದರಿಕೆಯೊಡ್ಡಿದ್ದರಂತೆ. ನಾಲ್ವರು ನಟರಾಜ್ನನ್ನು ಹೊಡೆದು ಕಳಿಸಿದ್ದರು. ನಂತರ ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ರಾಮರಾಜನ್ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೃತನ ಸಹೋದರಿ, ಪ್ರೇಮಿಯೊಂದಿಗೆ ಮದುವೆ ಮಾಡಿಸುವುದಾಗಿ ಕರೆಸಿಕೊಂಡು ಕೊಲೆಮಾಡಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಕುದೂರು ಪೊಲೀಸರು ತನಿಖೆ ನಡೆಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಎರಡೂ ಕೋಮುಗಳಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.