ರಾಮನಗರ:ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2023 ರ ನಾಗರಿಕ ಸೇವೆಗಳ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ರಾಮನಗರ ಜಿಲ್ಲೆಯ ಇಬ್ಬರು ತೇರ್ಗಡೆ ಹೊಂದಿದ್ದಾರೆ. ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣ ಗ್ರಾಮದ ಯುವತಿ ದಾಮಿನಿ ಎಂ.ದಾಸ್ ಅವರು 345 ನೇ ರ‍್ಯಾಂಕ್ ಪಡೆದರೆ, ಹಾರೋಹಳ್ಳಿಯ ಚೆಲುವರಾಜು 238 ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚೆಲುವರಾಜು (238 ನೇ ರ‍್ಯಾಂಕ್) : ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ದೊಡ್ಡಬಾದಿಗೆರೆಯ ರೈತ ಕುಟುಂಬದ ಚೆಲುವರಾಜು 238 ನೇ ರ‍್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವೀಧರ ಚೆಲುವರಾಜು ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿವರೆಗೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಸತತ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ಮುಂದಿನ ದಿನಗಳಲ್ಲಿ ಸರ್ಕಾರಿ ಸೇವೆಯಲ್ಲಿ ಜನರಿಗೋಸ್ಕರ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದೂ ಸೇರಿದಂತೆ ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
ಪರೀಕ್ಷಾ ತಯಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಕೆ ಮಾಡಿದರೆ ಯುಪಿಎಸ್‌ಸಿ ಪರೀಕ್ಷೆಗೆ ಹೆಚ್ಚಿನ ಅಭ್ಯಾಸ ಬೇಕಾಗುತ್ತದೆ. ಎಷ್ಟು ಗಂಟೆಗಳ ಕಾಲ ಓದಿದ್ದೀವಿ ಎನ್ನುವುದಕ್ಕಿಂತಲೂ ಏನನ್ನು ತಿಳಿದುಕೊಂಡಿದ್ದೀವಿ ಅನ್ನುವುದು ಇಲ್ಲಿ ಬಹಳ ಮುಖ್ಯ. ದಿನಕ್ಕೆ 10 ಗಂಟೆಗಳ ಕಾಲ ಅಭ್ಯಾಸ ಮಾಡಬೇಕಾಗುತ್ತದೆ" ಎಂದು ತಿಳಿಸಿದರು.