ರಾಮನಗರ:ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಕಂಚುಗಲ್ ಬಂಡೆಮಠದ ಲಿಂಗಾಯತ ಮಠಾಧೀಶರಾದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬಸವಲಿಂಗ ಶ್ರೀಗಳಿಗೆ ಮಹಿಳೆಯೊಬ್ಬರ ಮೂಲಕ ಹನಿಟ್ರ್ಯಾಪ್ ಮಾಡಿ, ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಸ್ವತಃ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಪೊಲೀಸ್ ತನಿಖೆ ವೇಳೆ ಕಂಡುಬಂದಿದೆ.
ಅ. 24ರಂದು ಮಾಗಡಿ ತಾಲೂಕಿನ ಸೋಲೂರು ಬಳಿಯ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿಯವರ ಮೃತದೇಹ ಮಠದ ಕೊಠಡಿಯೊಂದರ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ವಾಮೀಜಿಯವರು ಬರೆದ ಡೆತ್ನೋಟ್ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ ಅನಾಮಧೇಯ ವ್ಯಕ್ತಿ ಬಗ್ಗೆ ಉಲ್ಲೇಖಿಸಿದ್ದು, ಅವರಿಂದ ಮಾನಸಿಕ ಒತ್ತಡ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಸಿಕ್ಕಿದೆ.
ಅಲ್ಲದೆ, ಬೆಂಗಳೂರು ಮೂಲದ ಮಹಿಳೆಯೋರ್ವರು ಸ್ವಾಮೀಜಿ ಬಳಿ ಆರಂಭದಲ್ಲಿ ತಮ್ಮ ಕಷ್ಟ ಹೇಳಿಕೊಂಡು, ನಂತರ ಸ್ವಾಮೀಜಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ನಂತರ ಮಹಿಳೆಯು ಹನಿಟ್ರ್ಯಾಪ್ ಮಾಡಿದ್ದರಿಂದ ಸ್ವಾಮೀಜಿಯವರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳು ಕೇಳಿಬಂದಿದೆ. ಇನ್ನೊಂದೆಡೆ ಆತ್ಮಹತ್ಯೆ ಹಿಂದೆ ಮಠದ ಆಸ್ತಿ ವಿವಾದವೂ ಕಾರಣವಾಗಿದೆ ಎಂಬೆಲ್ಲ ಮಾತುಗಳೂ ಕೇಳಿಬಂದಿವೆ. ಈ ನಡುವೆ, ಸ್ವಾಮೀಜಿಯವರದ್ದು ಎನ್ನಲಾದ ಡೆತ್ನೋಟ್ ಹಾಗೂ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.