ರಾಮನಗರ: ತಾಂತ್ರಿಕ ಕಾರಣದಿಂದ ರಾಮನಗರದ ಬಳಿ ರೈಲು ಬೋಗಿಗಳು ಬೇರ್ಪಟಿದ್ದು, ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಮೈಸೂರಿನಿಂದ ಬೆಂಗಳೂರು ಕಡೆಗೆ ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಹೊರಟಿದ್ದ ತೂತುಕುಡಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ರಾಮನಗರ ನಿಲ್ದಾಣದಲ್ಲಿ ಬೇರ್ಪಟ್ಟಿವೆ.
ತಾಂತ್ರಿಕ ಕಾರಣದಿಂದಾಗಿ ಬೋಗಿಗಳು ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮಾಡಲಾಗುವುದು. ತನಿಖೆ ವೇಳೆ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನೋಡುನೋಡುತ್ತಲೇ ರೈಲಿನ ಮಧ್ಯಭಾಗದ ಬೋಗಿಗಳು ಬೇರ್ಪಟ್ಟವು. ಇದರಿಂದ ರೈಲಿನಲ್ಲಿ ಇದ್ದ ಪ್ರಯಾಣಿಕರು ಬೆಚ್ಚಿ ಬಿದ್ದರು. ನಂತರದಲ್ಲಿ ರೈಲು ಅಲ್ಲಿಯೇ ನಿಂತಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಹಳಿ ತಪ್ಪಿ ನೆಲಕ್ಕುರುಳಿದ 12 ರೈಲು ಬೋಗಿಗಳು:ಬಾಂದ್ರಾದಿಂದ ಜೋಧ್‌ಪುರಕ್ಕೆ ಬರುತ್ತಿದ್ದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲು ಇತ್ತೀಚೆಗೆ ಪಾಲಿ ನಿಲ್ದಾಣ ತಲುಪುವ ಮುನ್ನವೇ ಹಳಿ ತಪ್ಪಿತ್ತು. ರೈಲಿನ 8 ಸ್ಲೀಪರ್ ಕೋಚ್‌ಗಳು ಸೇರಿದಂತೆ 9 ಬೋಗಿಗಳು ಪಲ್ಟಿಯಾಗಿದ್ದವು. 3 ಬೋಗಿಗಳು ಹಳಿ ತಪ್ಪಿದ್ದವು. ಅಪಘಾತದಲ್ಲಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು. ವಾಯುವ್ಯ ರೈಲ್ವೆಯ ಸಿಪಿಆರ್ಒ ಅಧಿಕಾರಿ ವಿಜಯ್ ಶರ್ಮಾ ಪ್ರತಿಕ್ರಿಯಿಸಿ, 'ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಜೋಧ್‌ಪುರದಿಂದ ಪರಿಹಾರ ರೈಲನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈಗಾಗಲೇ ಉನ್ನತ ಅಧಿಕಾರಿಗಳು ಸ್ಥಳ ತಲುಪಿದ್ದಾರೆ. ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 12480 ಬಾಂದ್ರಾ ಟರ್ಮಿನಸ್‌ನಿಂದ ಹೊರಟಿದ್ದ ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್‌ನ 12 ಕೋಚ್‌ಗಳು ಜನವರಿ 1ರ ಮುಂಜಾವು 03.27ಕ್ಕೆ ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮದರಾ ಮಾರ್ಗಮಧ್ಯೆ ಹಳಿ ತಪ್ಪಿವೆ' ಎಂದು ತಿಳಿಸಿದ್ದರು. ಘಟನೆಯಲ್ಲಿ 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ' ಎಂದು ವಾಯುವ್ಯ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದರು.