ರಾಮನಗರ :ರಾಮನಗರ ನಗರಸಭೆ ಕಾರ್ಯವೈಖರಿ ಖಂಡಿಸಿ ನಾಳೆ ರಾಮನಗರ ಬಂದ್ ಮಾಡಲು ಜನ ಜಾಗೃತಿ ವೇದಿಕೆಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಮನಗರ ಬಂದ್‍ಗೆ ಕರೆ ಕೊಟ್ಟ ಜನ ಜಾಗೃತಿ ವೇದಿಕೆ.. ಇಂದು ಸುದ್ದಿಗೋಷ್ಠಿ ನಡೆಸಿದ ಜನಜಾಗೃತಿ ವೇದಿಕೆ, ನಗರಸಭೆ ಆಡಳಿತದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಎರಡು ವರ್ಷಗಳಿಂದ ನಗರಸಭೆ ಚುನಾವಣೆಯೂ ನಡೆದಿಲ್ಲ. ಇದರಿಂದ ಅಧಿಕಾರಿಗಳೇ ಸರ್ವಾಧಿಕಾರಿ ಎಂಬಂತೆ ಸಾರ್ವಜನಿಕರ ಜತೆ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಮಾಡಿ ಕೊಡಲಾಗುತ್ತದೆ. ಈ ಬಗ್ಗೆ ಅನೇಕ ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರ ಮಾತಿಗೂ ಬಗ್ಗದೇ ತಮ್ಮದೇಯಾದ ರೀತಿ ನಡೆದುಕೊಳ್ಳುತ್ತಿದ್ದಾರೆ.
ಹೀಗಾಗಿ, ನಾಳೆ ರಾಮನಗರ ಬಂದ್‍ಗೆ ಕರೆ ನೀಡಲಾಗಿದೆ. ನಾಳೆ 11 ಗಂಟೆಗೆ ರಾಮನಗರ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಬಂದ್ ಕರೆ ಹಿನ್ನೆಲೆ ಯಾವ ರಾಜಕೀಯವೂ ಇಲ್ಲ. ಯಾರ ವಿರುದ್ಧವೂ ಇಲ್ಲ. ಇದು ನಗರಸಭೆ ವ್ಯವಸ್ಥೆಯ ಸುಧಾರಣೆಗೆ ನಡೆದಿರುವ ಪ್ರತಿಭಟನೆ. ಬಂದ್‍ಗೆ ವ್ಯಾಪಾರಸ್ಥರು, ಡೀಲರ್‌ಗಳು, ಆಟೋರಿಕ್ಷ ಚಾಲಕರು, ಕೃಷಿಕರು ಸೇರಿ ಎಲ್ಲ ವರ್ಗದ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.