ಕರ್ನಾಟಕ

karnataka

ETV Bharat / state

2 ಬಾರಿ ಸ್ಫೋಟಗೊಂಡರು ಎಚ್ಚರಗೊಳ್ಳದ ಜಿಲ್ಲಾಡಳಿತ : ರಾಮನಗರದಲ್ಲಿ ಅಕ್ರಮ ಗಣಿಗಳೆಷ್ಟು ಗೊತ್ತಾ? - ಕಲ್ಲು ಗಣಿಗಾರಿಕೆ

ರಾಜ್ಯದಲ್ಲಿ ಗಣಿ ಸ್ಫೋಟಕ್ಕೆ ಬಳಸುವ ಜಿಲೆಟಿನ್ ಸೇರಿದಂತೆ ಯಾವುದೇ ಸ್ಫೋಟಕಗಳ ಬಳಕೆ ನಿರ್ಬಂಧವಿಲ್ಲದೆ ನಡೆಯುತ್ತಿದೆ ಎನ್ನುವುದಕ್ಕೆ ರಾಜಧಾನಿ ಮಗ್ಗುಲಲ್ಲಿಯೇ ಇರುವ ಮರಳೇಗವಿ ಮಠದ ಬಳಿ ನಡೆದ ಕಾರು ಸ್ಫೋಟ ಸ್ಪಷ್ಟ ನಿದರ್ಶನ..

Till now Twice exploded by gelatin in ramanagara
ಎರಡು ಬಾರಿ ಸ್ಫೋಟಗೊಂಡರು ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ:

By

Published : Aug 22, 2021, 4:40 PM IST

ರಾಮನಗರ: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ್ದ ಗಣಿ ಸ್ಫೋಟ ಪ್ರಕರಣಗಳು ಮಾಸುವ ಮುನ್ನವೇ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿನ ಸಿಡಿಮದ್ದು ಸ್ಫೋಟ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಕನಕಪುರ ತಾಲೂಕಿನ ಮರಳೆಗವಿ ಮಠದ ಸಮೀಪ ಗಣಿಗಾರಿಕೆಗೆ ಸಿಡಿಮದ್ದು ಕೊಂಡೊಯ್ಯುತ್ತಿದ್ದ ಚಾಲಕನ ಸಮೇತ ಕಾರು ಸ್ಫೋಟಗೊಂಡು ಛಿದ್ರ ಛಿದ್ರಗೊಂಡಿದೆ. ಪ್ರಭಾವಿ ರಾಜಕೀಯ ಮುಖಂಡರ ಕೈವಾಡದಿಂದ ಇದರ ತನಿಖೆ ಹಳ್ಳ ಹಿಡಿಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಈವರೆಗೆ ಗಣಿಗಾರಿಕೆ ಸ್ಫೋಟ ಎಲ್ಲೆಲ್ಲಿ ಗೊತ್ತಾ!?:ಜನವರಿ 21ರ ಶಿವಮೊಗ್ಗದ ಹುಣಸಗೋಡಿನ ಗಣಿ ದುರಂತ ಹಾಗೂ ಫೆಬ್ರವರಿ 22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ನಡೆದ ಗಣಿ ಸ್ಫೋಟದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಇದಾದ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತಿರುವಂತೆ ಕಾಣುತ್ತಿಲ್ಲ.

ಈ ಎರಡು ಗಣಿ ಸ್ಫೋಟ ಪ್ರಕರಣಗಳ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಲ್ಲಿ ಎಡವಿದೆ. ಹೀಗಾಗಿಯೇ, ಇಂತಹ ಘಟನೆ ಮತ್ತೆ ಮತ್ತೆ ಮರುಕಳಿಸುತ್ತಿವೆ.

ರಾಜ್ಯದಲ್ಲಿ ಗಣಿ ಸ್ಫೋಟಕ್ಕೆ ಬಳಸುವ ಜಿಲೆಟಿನ್ ಸೇರಿದಂತೆ ಯಾವುದೇ ಸ್ಫೋಟಕಗಳ ಬಳಕೆ ನಿರ್ಬಂಧವಿಲ್ಲದೆ ನಡೆಯುತ್ತಿದೆ ಎನ್ನುವುದಕ್ಕೆ ರಾಜಧಾನಿ ಮಗ್ಗುಲಲ್ಲಿಯೇ ಇರುವ ಮರಳೇಗವಿ ಮಠದ ಬಳಿ ನಡೆದ ಕಾರು ಸ್ಫೋಟ ಸ್ಪಷ್ಟ ನಿದರ್ಶನ.

ಈಗ ಮತ್ತೊಮ್ಮೆ ಕನಕಪುರ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಬಳ್ಳಾರಿ ಘಟನೆ ಮೀರಿಸುವ ರೀತಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕ್ರಷರ್‌ಗಳ ಹಾವಳಿ ಹಾಗೂ ಕಲ್ಲು ಕ್ವಾರಿಗಳ ಆರ್ಭಟ ಸುದ್ದು ಮಾಡುತ್ತಿವೆ. ಈ ಗಣಿಗಾರಿಕೆ ಪ್ರಾಕೃತಿಕ ಸೌಂದರ್ಯಕ್ಕೆ ಘಾಸಿ ಮಾಡುತ್ತಿದೆ. ಅರಣ್ಯ ಪ್ರದೇಶ, ಗೋಮಾಳ, ಸರ್ಕಾರಿ ಭೂಮಿಗಳಲ್ಲದೇ ಕಂದಾಯ ಭೂಮಿಗಳಲ್ಲೂ ಸಣ್ಣಪುಟ್ಟ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಯೂ ಕೂಡ ಜಿಲೆಟಿನ್ ಕಡ್ಡಿಗಳು, ಸಿಡಿ ಮದ್ದುಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.

ಮನುಷ್ಯನ ಪ್ರಾಣದ ಜೊತೆ ಚೆಲ್ಲಾಟ :ಗಣಿ ಸ್ಫೋಟ ಸಂಭವಿಸಿದಾಗ ಭೂ ವಿಜ್ಞಾನಿ ಹಾಗೂ ನ್ಯಾಯಾದೀಶರನ್ನು ಒಳಗೊಂಡ ಆಯೋಗದಿಂದ ತನಿಖೆ ನಡೆಸಬೇಕು. ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು ಎನ್ನುವ ಕೂಗಿಗೆ ಸರ್ಕಾರ ಸೊಪ್ಪು ಹಾಕಿಲ್ಲ. ಘಟನೆ ನಡೆದಾಗ ಕೂಗು ಹಾಕುವ ವಿಪಕ್ಷಗಳು ಕೂಡ ಸೂತಕ ಕಳೆದ ಮನೆ ಮತ್ತೇ ತಹಬದಿಗೆ ಬಂದಂತೆ ವರ್ತಿಸುತ್ತಿರುವುದು ಕೂಡ ಗಣಿಗಾರಿಕೆ ಯಥಾಸ್ಥಿತಿಗೆ ತರುವುದರ ಜೊತೆಗೆ ಜೀವಗಳ ಜೊತೆ ಜೂಜಾಟವಾಡುತ್ತಿರುವಂತೆ ಕಾಣುತ್ತಿದೆ ಅಂತಾ ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಕಲ್ಲು ಗಣಿಗಾರಿಕೆಯಿಂದ ಪರಿಸರೀಕರಣ, ಕೃಷಿ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಅಮಾಯಕರು ಪ್ರಾಣ ತೆತ್ತುತ್ತಿರುವುದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಮೀನಾಮೇಷಾ ಎಣಿಸುತ್ತಿದೆ. ಗಣಿ ಉದ್ಯಮಿಗಳೊಟ್ಟಿಗೆ ಕೈಜೋಡಿಸಿದೆ ಎನ್ನುವುದು ಕೂಡ ಇಲ್ಲಿನ ಪರಿಸರ ಪ್ರೇಮಿಗಳ ಆರೋಪ.

2017ರಲ್ಲಿ ಸ್ಫೋಟ ಸಂಭವಿಸಿ ಇಬ್ಬರ ಸಾವು :2017ರ ಮೇ ತಿಂಗಳಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲೂಕು ತಾವರೆಕರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲುಗಣಿಯೊಂದರಲ್ಲಿ ಅನಾಹುತ ಸಂಭವಿಸಿತ್ತು. ಮಾದಾಪಟ್ಟಣ ಎಂಬ ಗ್ರಾಮದ ಬಳಿಯ ಕಲ್ಲುಗಣಿಯೊಂದರಲ್ಲಿ ಸ್ಫೋಟಕಗಳನ್ನು ಶೇಖರಿಸಿ ಇಡಲಾಗಿತ್ತು.

ರಾತ್ರಿ ಧಾರಾಕಾರ ಮಳೆ ಮತ್ತು ಸಿಡಿಲು, ಮಿಂಚು ಆರ್ಭಟ ಇತ್ತು. ಬಿಹಾರ ಮೂಲದ ಇಬ್ಬರು ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿದ್ದರು. ಆ ವೇಳೆ ಸ್ಫೋಟಕಗಳಿದ್ದ ಸ್ಥಳಕ್ಕೆ ಸಿಡಿಲು ಬಡಿದು ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದರು. ಇದಾದ ನಂತರ ಜಿಲ್ಲೆಯಲ್ಲಿ ಮರಳೇಗವಿ ಮಠದ ಸಮೀಪ ಸಂಭವಿಸಿರುವ ಕಾರು ಸ್ಫೋಟ ಎರಡನೇ ಪ್ರಕರಣವಾಗಿದೆ.

ಜಿಲ್ಲೆಯಲ್ಲಿ 171 ಕಲ್ಲುಗಣಿ ಗುತ್ತಿಗೆ :ಜಿಲ್ಲೆಯಲ್ಲಿ ಅಕ್ರಮವಾಗಿ ಎಷ್ಟು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಸ್ವತಃ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಬಳಿಯೇ ಇಲ್ಲ. ತೀರಾ ಇತ್ತೀಚೆಗೆ ಗಣಿ ಖಾತೆ ಸಚಿವರು ಜಿಲ್ಲೆಗೆ ಭೇಟಿ ನೀಡಿದಾಗ ಸಚಿವರು ಇದೇ ಪ್ರಶ್ನೆಯನ್ನು ಅಧಿಕಾರಿಗಳಿಗೆ ಕೇಳಿದ್ದರು. ಉತ್ತರ ಸಿಗದಿದ್ದಾಗ ವರದಿ ಕೊಡಿ ಎಂದು ಸಹ ಆದೇಶಿಸಿದ್ದರು.

ಸದ್ಯ 15 ರಿಂದ 20 ಅಕ್ರಮ ಗಣಿಗಾರಿಕೆಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಅಲಂಕಾರಿಕ ಕಲ್ಲುಗಣಿಗಾರಿಕೆ ನಡೆಸುವ 61 ಗಣಿ ಗುತ್ತಿಗೆಗಳಿವೆ. ಈ ಪೈಕಿ 30 ಗುತ್ತಿಗೆಗಳು ಚಾಲ್ತಿಯಲ್ಲಿವೆ, ಕಟ್ಟಡಕಲ್ಲು ಗಣಿಗೆ 110 ಗುತ್ತಿಗೆಗಳನ್ನು ನೀಡಲಾಗಿದೆ. ಈ ಪೈಕಿ 65 ಚಾಲ್ತಿಯಲ್ಲಿದ್ದರೆ 44 ನಿಷ್ಕ್ರೀಯವಾಗಿವೆ. ಜಿಲ್ಲೆಯಲ್ಲಿ 53 ಜಲ್ಲಿ ಕ್ರಷರ್ ಘಟಕಗಳಿದ್ದು, 12 ಎಂ ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಲಾಗಿದೆ.

ABOUT THE AUTHOR

...view details