ರಾಮನಗರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಈ ಗ್ರಾಮದಲ್ಲಿ ಬಂಧಿಯಾದ 7ನೇ ಚಿರತೆ ಇದಾಗಿದೆ.
ತಾಲೂಕಿನ ಕೂಟಗಲ್ ಹೋಬಳಿಯ ಅರೇಹಳ್ಳಿ ಗ್ರಾಮದಲ್ಲಿ ಚಿರತೆ ಉಪಟಳದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ರಾತ್ರಿ ಆಯ್ತು ಅಂದ್ರೆ ಸಾಕು ಪ್ರಾಣಿಗಳನ್ನು ಕಾಯೋದೇ ಗ್ರಾಮಸ್ಥರಿಗೆ ಹರಸಾಹಸ ಎನ್ನುವಂತಾಗಿದ್ದು, ಭಯದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಲ್ಲದೆ ಚಿರತೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಲೇ ಬಂದಿದ್ದರು. ಹೀಗಾಗಿ ಗ್ರಾಮದ ಮರಿಚಿಕ್ಕೇಗೌಡ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಈ ಬೋನಿಗೆ ಇದೀಗ 3 ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.