ರಾಮನಗರ:ಚನ್ನಪಟ್ಟಣ ತಾಲೂಕು ಸಾತನೂರು ಸರ್ಕಲ್ ಬಳಿ ಇರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪಡಿತರ ಆಹಾರ ವಿತರಣಾ ಗೋದಾಮಿನಲ್ಲಿ 1,600 ಕ್ವಿಂಟಾಲ್ (3000 ಮೂಟೆ 50 ಲಕ್ಷ ರೂ ಅಂದಾಜು ಮೌಲ್ಯ) ಅಕ್ಕಿ ಗೋಲ್ ಮಾಲ್ ಆಗಿದೆ ಎಂದು ಜಿಲ್ಲಾ ಆಹಾರ ಇಲಾಖೆಯ ನಿರ್ದೇಶಕರು ಪರಿಶೀಲನೆ ಮಾಡಿದ ವೇಳೆ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಗೋದಾಮಿನ ಮೇಲ್ವಿಚಾರಕರಾಗಿದ್ದ ಚಂದ್ರು ಅವರ ವಿರುದ್ಧ ದೂರು ದಾಖಲಾಗಿದ್ದು ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ತಾಲೂಕಿನ 67 ಪಡಿತರ ಕೇಂದ್ರಗಳಿಗೆ ಪಡಿತರ ಆಹಾರ ವಿತರಣೆ ಮಾಡುವ ಅನುಮತಿ ಪಡೆದಿರುವ ಟಿಎಪಿಸಿಎಂಎಸ್, ಪ್ರತಿ ತಿಂಗಳು ಅಕ್ಕಿಯನ್ನು ಸಾತನೂರು ಸರ್ಕಲ್‍ನ ಟಿಎಪಿಸಿಎಂಎಸ್ ಗೋದಾಮಿನಿಂದಲೇ ಪಡಿತರ ಕೇಂದ್ರಗಳಿಗೆ ಕಳಿಸಲಾಗುತಿತ್ತು. ಆಹಾರ ಇಲಾಖೆಯಿಂದ ಒಂದು ತಿಂಗಳ ಮುನ್ನವೇ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗೋದಾಮಿನಲ್ಲಿ ಅಕ್ಕಿಯನ್ನು ಸಂಗ್ರಹ ಮಾಡಲಾಗುತ್ತಿದೆ.
ಅಲ್ಲದೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕಳಿಸುವ ಮುನ್ನ, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯದೆ ಉಳಿದಿರುವ ದಾಸ್ತಾನನ್ನು ಕಡಿತ ಮಾಡಿ ನ್ಯಾಯಬೆಲೆ ಅಂಗಡಿಗೆ ಬಾಕಿ ಪಡಿತರ ಅಕ್ಕಿ ವಿತರಣೆ ಮಾಡಬೇಕಿರುತ್ತದೆ. ಈ ಬಗ್ಗೆ ತಾಲೂಕಿನ ಆಹಾರ ನಿರೀಕ್ಷರು ಹಾಗೂ ಶಿರೇಸ್ತೆದಾರ ಅವರು ಗೋದಾಮಿನ ಕಂಪ್ಯೂಟರ್ನಲ್ಲಿ ಆಪ್‍ಗೆ ಹೆಬ್ಬೆಟು ಸಹಿ ನೀಡಬೇಕು, ಜೊತೆಗೆ ಬಾಕಿ ಸ್ಟಾಕ್ ಪರಿಶೀಲನೆ ಮಾಡಿ ಜಿಲ್ಲಾ ಆಹಾರ ಶಾಖೆಗೆ ಮಾಹಿತಿಯನ್ನು ನೀಡಬೇಕಿದೆ.
ಆದರೆ ಇಲ್ಲಿ ಜಿಲ್ಲಾ ಆಹಾರ ಶಾಖೆಗೆ ನೀಡಿರುವ ಮಾಹಿತಿಯಲ್ಲಿ ಎಲ್ಲಾ ದಾಖಲೆಗಳು ಮತ್ತು ಸ್ಟಾಕ್‍ನ ಮಾಹಿತಿಗಳು ಸಮರ್ಪಕವಾಗಿದೆ ಹೊರತು ಗೋದಾಮಿನಲ್ಲಿ ಸ್ಟಾಕ್‍ನಂತೆ ಅಕ್ಕಿ ಇಲ್ಲದಿರುವ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವುದೇ ಇಷ್ಟೊಂದು ಪ್ರಮಾಣದಲ್ಲಿ ಅಕ್ಕಿ ನಾಪತ್ತೆ ಆಗಲು ಕಾರಣವಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆಯಿಂದಲೇ ಕಂಡು ಬಂದಿದೆ.