ರಾಮನಗರ:ಯಾವುದೇ ಪ್ರಚಾರದ ಗೀಳಿಗೆ ಬೀಳದೆ ಮಧ್ಯರಾತ್ರಿ ಕರೆದರೂ ನೋ ಎನ್ನದೇ ನೊಂದವರ ನೆರವಿಗೆ ಧಾವಿಸುವ ಈಕೆಯ ಹೆಸರು ಆಶಾ. ಒಂದು ಬಡ ಕುಟುಂಬದ ಬಂದ ಇವರು ವೆಂಕಟಪ್ಪ ಸಾಕಮ್ಮ ದಂಪತಿ ಮಗಳು.
ಅನಾಥ ಶವಗಳ ಪಾಲಿನ "ಆಶಾ"ಕಿರಣ ಈ ಮಹಿಳೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಫ್ಯಾಷನ್ ಲೋಕಕ್ಕೆ ತಿರುಗಿ ಓದು, ಕೆಲಸ, ಸಿನಿಮಾ, ಪಬ್ಬು, ಮದುವೆ ಮಕ್ಕಳು, ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಅಗತ್ಯತೆಗೆ ತಕ್ಕಂತೆ ತಮ್ಮದೇ ಆದ ಜವಾಬ್ದಾರಿ ನಿರ್ವಹಿಸುವ ಈ ಸಮಯದಲ್ಲಿ ತಾನು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ತನ್ನೆದುರು ಯಾರಾದರೂ ನೊಂದವರನ್ನು ನೋಡಿದರೆ ಹಗಲು - ರಾತ್ರಿ ಎನ್ನದೇ ಅವರ ಸೇವೆ ಮಾಡುತ್ತಾರೆ.
ತನ್ನ ಕೈಲಾದ ಸಹಾಯ ಮಾಡುವ ಈ ಹೆಣ್ಣು ಮಗಳು ಮಂಡ್ಯದಿಂದ ಹಿಡಿದು ಕೆಂಗೇರಿವರೆಗೆ ಎಲ್ಲರ ಬಾಯಿಂದ ಆಪತ್ಬಾಂಧವೇ ಎಂದು ಕರೆಸಿಕೊಳ್ಳುವ ಯುವತಿ ಅದೆಷ್ಟು ಜನರಿಗೆ ಮಾದರಿ ಎಂದರೆ ತಪ್ಪಿಲ್ಲ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ.. ಬಂದು ಹೋಗುವ ಮೂರು ದಿನಗಳ ಈ ಜೀವನದಲ್ಲಿ ಇರುವ ಕತ್ತಲೆಯನ್ನು ಓಡಿಸಿ ಏನನ್ನಾದರೂ ಸಾಧಿಸುವ ಛಲ ನನ್ನದು. ಈ ರೀತಿ ಉತ್ತಮ ಕಾರ್ಯಗಳಿಗೆ ಬಳಸಿದರೆ ದೇವರು ಇನ್ನಷ್ಟು ಆರೋಗ್ಯ ವೃದ್ಧಿಸಿ ಕುಟುಂಬ ರಕ್ಷಿಸುತ್ತಾನೆ ಎಂಬ ಅಚಲವಾದ ನಂಬಿಕೆ ಆಶಾಳದ್ದು.
ಭಯ ಅಂಜಿಕೆ ಮಾತೇ ಇಲ್ಲ!
ಹೌದು ಸ್ವಲ್ಪವೂ ಹೇಸಿಗೆ ಪಡೆದೆ ಎಷ್ಟೋ ದಿನಗಳಿಂದ ನೀರಿನಲ್ಲಿ ಮುಳುಗಿ, ಕೊಳೆತು ಹೋಗಿರುವ ಮನುಷ್ಯ ಮತ್ತು ಪ್ರಾಣಿಯ ದೇಹವನ್ನು ಸ್ವಲ್ಪವೂ ಅಂಜಿಕೆ ಇಲ್ಲದೆ ಮುಟ್ಟಿ ಮೇಲೆತ್ತುತ್ತಾರೆ ಈ ಧೀರ ವನಿತೆ. ರೈಲಿಗೆ ಸಿಲುಕಿ ಛಿದ್ರ ಛಿದ್ರವಾದ ದೇಹ, ರುಂಡ ದಿಂದ ಬೇರ್ಪಟ್ಟ ಮುಂಡ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುವ ಅರೆ ಹೋದ ಜೀವ, ಒಂದೊಂದು ದಿಕ್ಕಿನಲ್ಲಿ ಬಿದ್ದ ಒಂದೊಂದು ಭಾಗವನ್ನು ಹೆಕ್ಕಿ ಚೀಲಕ್ಕೆ ತುಂಬಿ ಪೊಲೀಸ್ ಇಲಾಖೆಯವರಿಗೆ ಹಸ್ತಾಂತರಿಸಿ ಮರಣೋತ್ತರ ಪರೀಕ್ಷೆ ಆದ ತಕ್ಷಣ ಅದನ್ನು ಭದ್ರವಾಗಿ ಶವಗಾರದಲ್ಲಿ ಇರಿಸಿ ಮನೆಗೆ ಹೋಗುತ್ತಾರಂತೆ ಆಶಾ.
ಯಾವುದೇ ಹೊತ್ತಲ್ಲದ ಹೊತ್ತಲ್ಲಿ ಫೋನ್ ರಿಂಗ್ ಆಗಲಿ, ಮಡಿಲಲ್ಲಿ ಮಕ್ಕಳು ಮಲಗಿರಲಿ. ತೋಳಲ್ಲಿ ಮಲಗಿದ ಮಕ್ಕಳ ತಲೆಗೆ ದಿಂಬನ್ನು ಇರಿಸಿ ತಾನು ತನ್ನ ಸೇವೆಯಲ್ಲಿ ತೊಡಗುತ್ತಾರೆ ಈ ಆಶಾ. ಅಂದ ಹಾಗೆ ಈ ಆಶಕ್ಕಳಿಗೆ ಹೆಚ್ಚಾಗಿ ಫೋನ್ ಮಾಡುವುದು ಪೋಲೀಸಿನವರೇ. ಈ ಮಹಾತಾಯಿಯ ಸೇವೆಯನ್ನು ಪರಿಗಣಿಸಿ ಸಂಘ-ಸಂಸ್ಥೆಗಳು, ರಾಜಕೀಯ ನಾಯಕರು, ಅಧಿಕಾರಿಗಳು, ಹಾರ ತುರಾಯಿ ಹಾಕಿ ನೂರಾರು ಸನ್ಮಾನಗಳನ್ನು ಮಾಡಿದ್ದಾರೆ.
ಇವರ ಮತ್ತೊಂದು ವಿಶೇಷ ಏನಾಪ್ಪಾ ಅಂದ್ರೆ, ಜಾತಿ ಧರ್ಮ ಮತ ಬೇಧವಿಲ್ಲದೇ ಇವರು ಎಲೆ ಮರೆಕಾಯಿಯಂತೆ ಜೀವನ ಮಾಡಿಕೊಂಡು ಬರುತ್ತಿದ್ದಾರೆ. ಅವರ ಈ ಸೇವೆ ಅಜರಾಮರವಾಗಿ ಮುಂದೆಯು ಕೂಡ ಹೀಗೆ ಸಾಗಲಿ ಎಂಬುದೇ ನಮ್ಮ ಆಶಯ.