ರಾಮನಗರ :ದೇಶದಲ್ಲಿ ಅಸಹಿಷ್ಣುತೆ ಕಾಡುತ್ತಿದ್ದು, ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಬಿಜೆಪಿ ಆಪತ್ತಿನ ವಾತಾವರಣ ಸೃಷ್ಟಿ ಮಾಡಿರುವ ಈ ಸಂಧರ್ಭದಲ್ಲಿ ಸಂವಿಧಾನ ರಕ್ಷಣೆ ಮಾಡುವ ಹೊಣೆ ನಮ್ಮ ಮೇಲಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರವಿಡುವ ಕಾಲ ಸನ್ನಿಹಿತವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿ ಡಿ.ಕೆ.ಸುರೇಶ್ ತಿಳಿಸಿದರು.
ರಾಮನಗರ ಕಾಂಗ್ರೆಸ್ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸುರೇಶ್ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಸುರೇಶ್, ಕೇಂದ್ರ ಸಚಿವರೊಬ್ಬರು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡಿದರೂ ಅದನ್ನು ಖಂಡಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಲಿಲ್ಲ ಎಂದರು. ಕಳೆದ ಐದು ವರ್ಷಗಳಲ್ಲಿಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಮೇಲೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದಿರುವ ದೌರ್ಜನ್ಯಗಳು ಸಾಕಷ್ಟಿವೆ ಎಂದು ಆರೋಪಿಸಿದರು.
ದೇಶದಲ್ಲಿ ಶಾಂತಿ ನೆಲೆಸಿ, ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಇರಬೇಕಾದರೆ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ, ಬಿಜೆಪಿಯ ಅಜೆಂಡಾ ವಿರುದ್ದ ದೇಶದ ಅಭಿವೃದ್ಧಿಗೆ ಚಿಂತನೆ ನಡೆಸುವ ನಾವುಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಉಳಿಯಲು, ಕೋಮುವಾದಿ ಶಕ್ತಿಗಳನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ರಾಹುಲ್ ಗಾಂಧಿ ಸ್ಪರ್ಧೆ ಮಾಡಿದರೆ ಸಂತೋಷ. ನಾನು ಮಾ.26 ರಂದು ಮೈತ್ರಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುತ್ತೇನೆ. ಕೊನೆ ಕ್ಷಣದಲ್ಲಿ ಏನುಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ಚುನಾವಣೆಯಲ್ಲಿ ನನ್ನ ವಿರುದ್ಧ ಮಹಿಳೆಯನ್ನು ನಿಲ್ಲಿಸಿದರೆ ನಾನು ಭಯ ಪಡುವುದಿಲ್ಲ. ಜಾತಕ, ಭವಿಷ್ಯ ನಮ್ಮ ಅಣ್ಣ (ಡಿ.ಕೆ. ಶಿವಕುಮಾರ್) ನೋಡಿಕೊಳ್ಳುತ್ತಾರೆ. ಅವನಿಗೆ ಅದರಲ್ಲಿ ಆಸಕ್ತಿ ಹೆಚ್ಚು ನಿಮಗೆ ಬೇಕಿದ್ದರೆ ಅವರನ್ನ ಕೇಳಿ ಎಂದರು.ಇದೇ ವೇಳೆ ಯಡಿಯೂರಪ್ಪ ಡೈರಿ ವಿಚಾರದ ಬಗ್ಗೆ ಈಗ ಏನೂ ಹೇಳುವುದಿಲ್ಲ. ಅಧಿಕಾರಿಗಳು ಅದರ ಕೆಲಸ ಮಾಡುತ್ತಾರೆ, ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುತ್ತೇವೆ ಎಂದು ಸುರೇಶ್ ಸ್ಪಷ್ಟನೆ ನೀಡಿದರು.