ರಾಮನಗರ: ಜಿಲ್ಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿ ನಡೆಯುತ್ತಿದೆ. ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ತನ್ನ ಪತ್ನಿ ಹೆಸರಲ್ಲಿ ಸರ್ಕಾರಿ ಗೋಮಾಳ ಗುಳುಂ ಮಾಡಿದ ಆರೋಪವನ್ನು ಶಾಸಕರು ಮಾಡಿದ್ರೆ, ಇತ್ತ ಹಾಲಿ ಶಾಸಕ ಎ.ಮಂಜುನಾಥ್, ತಾಯಿ ಹೆಸರಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಜಾಗವನ್ನ ಲಪಟಾಯಿಸಿದ್ದಾರೆ ಎಂದು ಮಾಜಿ ಎಂಎಲ್‌ಎ ಪ್ರತ್ಯಾರೋಪ ಮಾಡಿದ್ದಾರೆ.
ಹಾಲಿ, ಮಾಜಿ ಶಾಸಕರ ನಡುವೆ ಜಟಾಪಟಿ:
ಲೋಕಲ್ ಫೈಟ್‌ನಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ವೈಯಕ್ತಿಕ ಹೇಳಿಕೆಗಳು ಭಾರಿ ಸದ್ದು ಮಾಡುತ್ತಿವೆ. ಬಿಡದಿಯ ಮೇಡನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಬಾಲಕೃಷ್ಣ, ತಮ್ಮ ಪತ್ನಿ ರಾಧಾ ಬಿ. ಕೃಷ್ಣ ಹೆಸರಿನಲ್ಲಿ ಕಂಪನಿ ಮಾಡಿಕೊಂಡಿದ್ದಾರೆ. ಅಲ್ಲದೇ ಬಡವರ ಜಮೀನು ಕಬಳಿಸಿ ಖಾಸಗಿ ಮೈಕೋ ಸಂಸ್ಥೆಯಿಂದ 36 ಕೋಟಿ ರೂ. ಹಣ ಪಡೆದುಕೊಂಡು ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ. ದುರಸ್ತಿ ಆಗದೇ ಇರುವ ಗೋಮಾಳ ಜಮೀನಿಗೆ ಮುಂಜಾನೆ 4 ಗಂಟೆಗೆ ತೆರಳಿ ಭೂಮಿ ಪೂಜೆ ಮಾಡಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಹಾಲಿ, ಮಾಜಿ ಶಾಸಕರ ನಡುವೆ ಮಾತಿನ ಜಟಾಪಟಿ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಹಬ್ಬನಕುಪ್ಪೆ ಗ್ರಾಮದ ಬೈರಮಂಗಲ ರಸ್ತೆಯಲ್ಲಿರುವ ಸರ್ಕಾರಿ ಜಾಗದ ಆಶ್ರಯ ಬಡಾವಣೆಯಲ್ಲಿ ಶಾಸಕ ಮಂಜುನಾಥ್ ಅವರು ತಾಯಿ ಗೌರಮ್ಮ ಹೆಸರಿಗೆ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನ ಗುಳುಂ ಮಾಡಿಕೊಂಡಿದ್ದಾರೆ. ಅವರಿಗೆ ಬೇರೆಯವರ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವಾ?. ನಾನು ನನ್ನ ಜೀವನದಲ್ಲಿ ಯಾವುದನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಯಾವುದಾದರೂ ಇದ್ರೆ ಹೇಳಲಿ ಎಂದು ಸವಾಲು ಹಾಕಿ, 4 ಸಾವಿರ ಅಡಿ ಜಾಗವನ್ನ ಬಡವರಿಗೆ ಬಿಟ್ಟು ಕೊಡ್ತೀರಾ ಎಂದು ಶಾಸಕ ಮಂಜುನಾಥ್ ವಿರುದ್ಧ ಹರಿಹಾಯ್ದರು.
ಒಟ್ಟಾರೆ ಹಾಲಿ, ಮಾಜಿ ಶಾಸಕರು ಪರಸ್ಪರ ವೈಯಕ್ತಿಕ ಹೇಳಿಕೆ ನೀಡುತ್ತಿರುವುದರಿಂದ ಮತದಾರರ ಮುಂದೆ ಮುಜುಗಾರಕ್ಕೆ ಒಳಗಾಗುತ್ತಿರುವುದಂತು ಸತ್ಯ. ಇಬ್ಬರು ನಾಯಕರ ಆರೋಪಗಳಲ್ಲಿ ಸತ್ಯಾಂಶವಿದ್ದರೆ ತನಿಖೆಯಿಂದ ಮಾತ್ರ ಹೊರಬರಬೇಕಿದೆ.