ರಾಮನಗರ:ಅವರು ಮನೆಗೆ ಆಧಾರ ಸ್ತಂಭವಾಗಿದ್ದರು. ಕಿರಾಣಿ ಅಂಗಡಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ ಮೇಯಲು ಬಿಟ್ಟಿದ್ದ ಹಸುಗಳನ್ನ ವಾಪಸ್ ಮನೆಗೆ ಕರೆದುಕೊಂಡು ಬರಲೆಂದು ಹೋದವರು ಶವವಾಗಿ ಪತ್ತೆಯಾಗಿದ್ದಾರೆ. ತಾಲೂಕಿನ ಅಚ್ಚಲು ಕಾಲೋನಿ ಮಹಿಳೆಯನ್ನ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೃತರನ್ನು ಅಚ್ಚಲು ಕಾಲೋನಿ ಗ್ರಾಮದ ಕೆಂಪಮ್ಮ(50) ಎಂದು ಗುರುತಿಸಲಾಗಿದೆ. ಕೆಂಪಮ್ಮನ ಗಂಡ ಕೆಂಚಪ್ಪನಿಗೆ ಒಂದು ಕಾಲು ಇಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಂಚಪ್ಪ ಆಟೋ ಓಡಿಸುತ್ತಾರೆ. ಕೆಂಪಮ್ಮ ಸಹ ಜೀವನ ಸಾಗಿಸುವುದಕ್ಕೆ ಗಂಡನಿಗೆ ಸಾಥ್ ನೀಡುತ್ತಿದ್ದರು. ಹೀಗಾಗಿ ಕೆಂಪಮ್ಮ ಗ್ರಾಮದಲ್ಲಿ ಸಣ್ಣದಾದ ಕಿರಾಣಿ ಇಟ್ಟುಕೊಂಡು ನಾಲ್ಕೈದು ಹಸುಗಳನ್ನು ಸಾಕಿಕೊಂಡು ಬದುಕು ನಡೆಸುತ್ತಿದ್ದರು. ಪ್ರತಿದಿನ ಬೆಳಗ್ಗೆ ಗ್ರಾಮದ ಸಮೀಪವೇ ಇರುವ ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದಲ್ಲಿ ಹಸುಗಳನ್ನು ಮೇಯಲು ಬಿಡುತ್ತಿದ್ದರು.
ಮೃತದೇಹವನ್ನು ನದಿಗೆ ಎಸೆದ ಕೊಲೆಗಾರರು: ಹಸುಗಳನ್ನು ವಾಪಸ್ ಮನೆಗೆ ಕರೆದುಕೊಂಡು ಬರಲು ಹೋಗಿದ್ದಾರೆ. ಆದ್ರೆ ಈ ವೇಳೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಕೆಂಪಮ್ಮನ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆಗೈದು, ನಂತರ ಕಿವಿಯೋಲೆ, ಮೂಗುತಿ, ತಾಳಿಯನ್ನು ಕಿತ್ತುಕೊಂಡಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ದೊಡ್ಡದಾದ ಚೀಲದಲ್ಲಿ ತುಂಬಿ ಪಕ್ಕದಲ್ಲೇ ಇದ್ದ ಆರ್ಕಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.