ರಾಮನಗರ:ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣದ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸಾಕುನಾಯಿಯೊಂದನ್ನು ಕೊಂದು ಹಾಕಿದೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ಹಳೇ ಬಸ್ ನಿಲ್ದಾಣದ ಬಳಿಯ ಡಾ.ಎಸ್.ಎಲ್. ತಿಮ್ಮಯ್ಯ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಮನೆಯ ಆವರಣದಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದ್ದು, ನಮ್ಮ ಸಾಕುನಾಯಿಯನ್ನು ಕೊಂದುಹಾಕಿದೆ ಎಂದು ದೇಸಿಗೌಡ ಎಂಬುವರು ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮುಂಜಾನೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ನಾವು ಬೀದಿ ನಾಯಿಗಳು ಇರಬಹುದು ಎಂದು ಸುಮ್ಮನಾಗಿದ್ದೆವು. ಬೊಗಳಾಟ ಹೆಚ್ಚಾದಾಗ ಹೊರಗೆ ಬಂದು ನೋಡಿದರೆ ಒಂದು ನಾಯಿ ಸತ್ತು ಬಿದ್ದಿತ್ತು. ಬೋನಿನಲ್ಲಿದ್ದ ಮತ್ತೊಂದು ನಾಯಿ ಬೊಗಳುತ್ತಲಿತ್ತು. ಟಾರ್ಚ್ ಬೆಳಕು ಹಾಯಿಸಿದಾಗ ಚಿರತೆ ಕಣ್ಣಿಗೆ ಬಿತ್ತು. ಕೂಡಲೇ ನಾವು ಮನೆ ಒಳಗೆ ಹೋಗಿ ಸದ್ದು ಮಾಡಿದೆವು. ಚಿರತೆ ಕೆಲಹೊತ್ತು ಅಲ್ಲಿಯೇ ಇದ್ದು ನಂತರ ಪರಾರಿಯಾಯಿತು’ ಎಂದು ದೇಸಿಗೌಡ ತಿಳಿಸಿದರು. ನಮ್ಮ ಮನೆಯ ಹೊರಗೆ ಹಸು ಕಟ್ಟಿದ್ದು, ಅದನ್ನು ಹಿಡಿಯಲು ಚಿರತೆ ಬಂದಿರಬಹುದು. ಅದರ ಹೆಜ್ಜೆ ಗುರುತುಗಳು ಅಂಗಳದಲ್ಲಿದೆ. ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.