ರಾಮನಗರ:ಚಿಕ್ಕ ವಯಸ್ಸಿನಿಂದಲೂ ಪರಿಸರ ಕಾಳಜಿ ಹೊಂದಿದ್ದ ಶಿಕ್ಷಕರೊಬ್ಬರು ನಿವೃತ್ತಿಯ ಬಳಿಕವೂ ಬರಡು ಭೂಮಿಯಲ್ಲಿ ಹಸಿರು ಹೊದಿಸಿ ಪರಿಸರ ಪ್ರೇಮ ಮೆರೆದಿದ್ದಾರೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಪುಟ್ಟಸ್ವಾಮಿ ಸತತ 32 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇದೀಗ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ.
ಇವರ ಪರಿಸರ ಪ್ರೇಮಕ್ಕೆ ಒಂದು ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಉದ್ಯಾನವನಗಳು ಹಸಿರಾಗಿ ನಿಂತಿವೆ. ಈ ಉದ್ಯಾನದಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದಾರೆ.
ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ 3 ಎಕರೆ ಪ್ರದೇಶದಲ್ಲಿ ಇವರು ಕವಿವನ ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡಮರಗಳು ಈಗ ಬೆಳೆದು ಬರಡಾಗಿದ್ದ ಪ್ರದೇಶ ಅರಣ್ಯವಾಗಿದೆ. ಕವಿವನವು ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿದೆ. ಪಕ್ಷಿಗಳಿಗೆ ಆಹಾರ ಒದಗಿಸುವ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಸಹಿತ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಪಕ್ಷಿ ಸಂಕುಲದ ಉಳಿವಿಗೂ ಪಣ ತೊಟ್ಟಿದ್ದಾರೆ.