ರಾಮನಗರ: ನಮ್ಮ ದೇಶದ ನೆಲದಲ್ಲಿ ವೈವಿಧ್ಯತೆ, ಧಾರ್ಮಿಕ ಸೌಹಾರ್ದತೆಗೆ ಏನೂ ಕೊರತೆ ಇಲ್ಲ. ಸಾಮರಸ್ಯ ಅನ್ನೋದು ಹಿಂದಿನಿಂದಲೂ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ಇಂತಹ ಧಾರ್ಮಿಕ ಸಾಮರಸ್ಯಕ್ಕೆ ತಾಜಾ ಉದಾಹರಣೆಯಾಗಿ ಮುಸ್ಲಿಂ ವ್ಯಕ್ತಿಯೋರ್ವ ನಿರ್ಮಿಸಿದ ಹಿಂದೂ ದೇವಾಲಯ ಕಣ್ಣೆದುರು ನಿಂತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ, ತಮ್ಮ ಸ್ವಂತ ಖರ್ಚಿನಲ್ಲಿ ಸೈಯದ್ ಸಾದತ್ ಎಂಬಾತ ಹಿಂದೂ ದೇವಾಲಯ ನಿರ್ಮಿಸಿ ಸೌಹಾರ್ದತೆಗೆ ಮುನ್ನುಡಿಯಾಗಿದ್ದಾರೆ.
ಬದುಕಲು ಹಣ ಮುಖ್ಯವಲ್ಲ ಸಾಮರಸ್ಯವೇ ಮುಖ್ಯ ಎಂದು ನಂಬಿರುವ ಸಾದತ್, ರಾಮನಗರದ ಚನ್ನಪಟ್ಟಣ ಕ್ಷೇತ್ರದವರು. ಇವರು ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿ ಮಾದರಿಯಾಗಿದ್ದಾರೆ. ವಿಶೇಷ ಅಂದ್ರೆ ಈ ದೇವಾಲಯದ ಕಾಂಪೌಂಡ್ ಒಳಗೆ ಮಸೀದಿಯೂ ಇದ್ದು, ಶಾಂತಿಧಾಮದ ಸಂಕೇತವಾಗಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಕೋವಿಡ್ ಕಾಲದಲ್ಲೂ ಸೇವೆ ಮಾಡಿದ್ದ ಸೈಯದ್
2010ರಲ್ಲಿ ಈ ರೀತಿಯ ದೇವಾಲಯ ನಿರ್ಮಾಣಕ್ಕೆ ಮುಂದಾದ ಸೈಯದ್ ಅದರಂತೆ ದೇವಾಲಯ ನಿರ್ಮಾಣ ಮಾಡಿ ಎಲ್ಲ ಮಾನವರಿಗೂ ದೇವನೊಬ್ಬನೇ ಅಂತ ಸಾರಿದ್ದಾರೆ. ಇದಿಷ್ಟೇ ಅಲ್ಲ ಕೋವಿಡ್ ಕಷ್ಟದ ಕಾಲದಲ್ಲಿ ಸಾವಿರಾರು ಮಂದಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ.