ಕರ್ನಾಟಕ

karnataka

ETV Bharat / state

ಅಧಿಕಾರಿಗಳ ವರ್ಗಾವಣೆ ದಂಧೆಗಿಳಿದ ರಾಜ್ಯ ಸರ್ಕಾರ: ಹೆಚ್​.ಡಿ.ಕುಮಾರಸ್ವಾಮಿ - ಅಧಿಕಾರಿಗಳ ವರ್ಗಾವಣೆ ದಂಧೆ

ರಾಜ್ಯ ಸರ್ಕಾರವು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

H.D. Kumaraswamy
ಹೆಚ್.ಡಿ. ಕುಮಾರಸ್ವಾಮಿ

By

Published : Jun 28, 2023, 8:06 PM IST

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ರಾಮನಗರ:''ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡುವ ದಂಧೆಗೆ ಇಳಿದಿದೆ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮತ್ತೀಕೆರೆ ಗ್ರಾಮದ ನೂತನ ಗ್ರಾಮ ಪಂಚಾಯತಿಗೆ ಕಟ್ಟಡಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ''ಐದು ಗ್ಯಾರಂಟಿಗಳ ಸರ್ಕಾರ, ಈಗ 6ನೇ ಗ್ಯಾರಂಟಿಯನ್ನೂ ಖಚಿತಪಡಿಸಿದೆ. ಸರ್ಕಾರವು ಕಾಸಿಗಾಗಿ ವರ್ಗಾವಣೆ ಮಾಡುತ್ತಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಉರುಳಾಡುತ್ತಿದೆ'' ಎಂದು ಕಿಡಿಕಾರಿದರು.

''ಸ್ವತಃ ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವಣೆ ದಂಧೆಯ ಹುಂಡಿ ಇದೆ ಎನ್ನುವುದು ಇಲ್ಲಿ ದಾಖಲೆ ಸಮೇತ ಬಯಲಾಗಿದೆ. ಒಂದೇ ಹುದ್ದೆಗೆ ಸ್ವತಃ ಮುಖ್ಯಮಂತ್ರಿ ಅವರೇ ನಾಲ್ವರಿಗೆ ಶಿಫಾರಸು ಪತ್ರ ಕೊಟ್ಟಿದ್ದಾರೆ. ಶಿಫಾರಸು ಪತ್ರಗಳಿಗೆ ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ವರ್ಗಾವಣೆಗಾಗಿ ಪೇಮೆಂಟ್ ಕೋಟಾ ನಿಯಂತ್ರಣ ಮಾಡುತ್ತಿರುವ ಆ ರಿಮೋಟ್ ಕಂಟ್ರೋಲ್ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಸರ್ಕಾರ ಬಂದ ಮೊದಲ ದಿನದಿಂದಲೇ ದುಡ್ಡಿಗಾಗಿಯೇ ವರ್ಗಾವಣೆಯ ದಂಧೆ ಶುರುವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದರ ಬದಲು ಬಂದಿದ್ದನ್ನು ಬಿಡದೇ ಬಾಚಿಕೋ.. ಎಂಬುದು ಈ ಸರ್ಕಾರದ ಧ್ಯೇಯನೀತಿ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ಲೂಟಿ ಪರ್ವಕ್ಕೆ ಹುಂಡಿ ಇಡಲಾಗಿದೆ" ಎಂದು ಮಾಜಿ ಸಿಎಂ ಗರಂ ಆದರು.

''ರಾಜ್ಯದ ಅಭಿವೃದ್ಧಿ ಕಡೆ ಸಚಿವರು ಕೆಲಸ ಮಾಡದೇ ಕೇವಲ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ. ಜನರಿಗೆ ಈಗ ಒಂದೊಂದೆ ವಿಷಯಗಳು ಗಮನಕ್ಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ದ ಜನರೇ ತಿರುಗಿ ಬಿದ್ದರೂ ಅಚ್ಚರಿ ಇಲ್ಲ. ಈಗಲಾದ್ರೂ ಎಚ್ಚೆತ್ತುಕೊಂಡು ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡಬೇಕು" ಎಂದು ಹೇಳಿದರು.

ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ- ಅಶ್ವತ್ಥ ನಾರಾಯಣ:''ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಆರಂಭವಾಗಿದೆ‌'' ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ''ಶಿಫಾರಸು ಪತ್ರ ಎಲ್ಲರೂ ಕೊಡುತ್ತಾರೆ. ಆದರೆ, ಈ ಸರ್ಕಾರದಲ್ಲಿ ಶಿಫಾರಸು ಪತ್ರ ಆಧರಿಸಿ ವರ್ಗಾವಣೆ ನಡೆಯುತ್ತಿಲ್ಲ. ಇದರ ಬದಲಾಗಿ ಹಣದ ಆಧಾರದ ಮೇಲೆ ವರ್ಗಾವಣೆ ನಡೆಯುತ್ತಿದೆ. ಸತ್ಯಹರಿಶ್ಚಂದ್ರ ಥರ ಮಾತಾನಾಡುತ್ತಾರೆ ಇವರು. ಆದರೆ, ಹಣ ಪಡೆದೇ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪಿಸಿದರು.

''ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಗ ಆಗಿರುವವರು ಸರ್ಟಿಫೈಡ್ ಅಧಿಕಾರಿಗಳಾ? ಇವರು ಯಾರೂ ಭ್ರಷ್ಟಾಚಾರಿಗಳಲ್ಲ ಅಥವಾ ಭ್ರಷ್ಟಾಚಾರ ಮಾಡಲ್ಲ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರಾ? ಈ ಸರ್ಕಾರ ಮೊದಲ ದಿನದಿಂದಲೇ ಭ್ರಷ್ಟಾಚಾರ ಮತ್ತು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಇದು ಮೋಸದ ಸರ್ಕಾರವಾಗಿದ್ದು, ಜನತೆಗೆ ಮೋಸ ಮಾಡಿ ಬಂದ ಸರ್ಕಾರವಾಗಿದೆ'' ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ

ABOUT THE AUTHOR

...view details