ಕರ್ನಾಟಕ

karnataka

ETV Bharat / state

ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ: ಸಚಿವ ಎಸ್.ಟಿ. ಸೋಮಶೇಖರ್ ಅಭಯ - ramanagara latest news

ನಗರದ ಎಪಿಎಂಸಿಗೆ ಸಚಿವ ಎಸ್. ಟಿ. ಸೋಮಶೇಖರ್​​ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.

ST Somashekar visits APMC Market
ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ: ಎಸ್.ಟಿ ಸೋಮಶೇಖರ್

By

Published : Apr 19, 2020, 12:11 PM IST

ರಾಮನಗರ: ಕಳೆದ ಸಾಲಿನಲ್ಲಿ ರೈತರಿಗೆ 13ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡಲಾಗಿತ್ತು. ಈ ಸಾಲಿನಲ್ಲೂ ರೈತರಿಗೆ 13 ಸಾವಿರ ಕೋಟಿ ಮೊತ್ತದಲ್ಲಿ ಸಾಲ ನೀಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ರೈತರಿಗೆ ಸಾಲ ನೀಡುವ ಬಗ್ಗೆ ಗೈಡ್​ಲೈನ್ಸ್ ವಿಧಿಸಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ನಗರದ ಎಪಿಎಂಸಿ ಗೆ ಭೇಟಿ ನೀಡಿದ್ದ ಅವರು ರೈತರೊಂದಿಗೆ ಚರ್ಚಿಸಿದರು. ಈ ವೇಳೆ ಪರಿಶೀಲನೆ ನಡೆಸಿದ ಅವರು, ರೈತರು ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸಾಗಾಣಿಕೆ ಮಾಡಲು ಚೆಕ್​​ಪೋಸ್ಟ್​ನಲ್ಲಿ ತೊಂದರೆಯ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಸಾಗಾಣಿಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ, ರೈತರು ಬೆಳೆದಂತಹ ಹಣ್ಣು ಮತ್ತು ತರಕಾರಿಯನ್ನು ಮಾರಾಟ ಮಾಡಲು ಎಪಿಎಂಸಿ ಮಾರುಕಟ್ಟೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ: ಎಸ್.ಟಿ. ಸೋಮಶೇಖರ್

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಎಪಿಎಂಸಿ ಅಧ್ಯಕ್ಷರು ರೈತರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿರುತ್ತಾರೆ. ನಸುಕಿನಜಾವ 3 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ರೈತರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿರುತ್ತಾರೆ. ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಧ್ವನಿವರ್ಧಕದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯೋಜಿತ ರೂಪದಲ್ಲಿ ವಹಿವಾಟು ನಡೆಯುತ್ತಿದೆ ಎಂದು ಸಚಿವರು ಹೇಳಿದ್ರು.

ರಾಜ್ಯದ ವಿವಿಧ ಎಪಿಎಂಸಿಗಳಿಗೆ ಭೇಟಿ ನೀಡಿದಾಗ ರೈತರು ದಪ್ಪ ಮೆಣಸಿನಕಾಯಿ, ನಿಂಬೆಹಣ್ಣು ಸೇರಿದಂತೆ ಎರಡು ಮೂರು ತರಕಾರಿ ಮಾರಾಟ ನಿರೀಕ್ಷೆಯಂತೆ ಆಗುತ್ತಿಲ್ಲ ಎಂದು ತಿಳಿಸಿದ್ದು, ಅವುಗಳ ಮಾಹಿತಿಯನ್ನು ಪಡೆಯಲಾಗಿದೆ. ರೈತರಿಗೆ ಸಹಾಯಹಸ್ತ ನೀಡಲು ಮುಂದಾಗಿರುವ ರಾಜಕಾರಣಿಗಳು, ಶಾಸಕರು ಹಾಗೂ ಇನ್ನಿತರ ಸಮಾಜ ಸೇವಕರಿಗೆ ಮಾಹಿತಿ ನೀಡಿ ಅವುಗಳನ್ನು ರೈತರಿಂದ ಖರೀದಿಸುವ ಕೆಲಸ ಸಹ ಮಾಡಲಾಗುತ್ತಿದೆ ಎಂದರು.

ಕೆಲವು ಹಣ್ಣು ಮತ್ತು ತರಕಾರಿಗಳನ್ನು ಹೋಟೆಲ್‌ಗಳಿಗೆ ಮಾರಾಟ ಮಾಡಲು ರೈತರು ಬೆಳೆದಿರುತ್ತಾರೆ. ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗದ ಪ್ರಕರಣಗಳಿದ್ದರೆ, ಅವುಗಳಿಗೆ ಸಿಎಂ ಜೊತೆ ಚರ್ಚಿಸಿ ಕೃಷಿ ಇಲಾಖೆಯಿಂದ ಸರ್ವೆ ಮಾಡಿಸಿ ಬೆಳೆ ಪರಿಹಾರ ಕೊಡಿಸಲಾಗುವುದು ಎಂದರು. ಲಾಕ್​ಡೌನ್​​ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿ ಅವರು ನಾಳೆ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಈಗಾಗಲೇ ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ಸಡಿಲಿಕೆ ನೀಡಲಾಗಿದೆ. ಈಗ ರೈತರಿಗೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಆದರೆ ಇಡಿ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಬೇಕೆ ಹೊರತು ಕಟ್ ಪೀಸ್ ಮಾಡಿ ಮಾರುವಂತಿಲ್ಲ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಗ್ರೀನ್ ಪಾಸ್ ಪಡೆದು ಬೆಂಗಳೂರಿನಲ್ಲಿ ಮಾರಾಟ ಮಾಡಬಹುದು. ಬೆಂಗಳೂರಿನಲ್ಲಿ 1400 ಅಪಾರ್ಟ್​​ಮೆಂಟ್​​ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಹಾಪ್‌ಕಾಮ್ಸ್​​ಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುವುದು ಎಂದರು.

ABOUT THE AUTHOR

...view details