ರಾಮನಗರ :ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿವೆ. ಹಲವರನ್ನು ಅಬ್ಸರ್ವೇಷನ್ನಲ್ಲಿಟ್ಟಿದ್ದೇವೆ. ಆದ್ದರಿಂದ ಎಲ್ಲರೂ ಗಂಭೀರತೆ ಅರಿತುಕೊಳ್ಳಿ, ಮನೆಯಿಂದ ಹೊರಬರಬೇಡಿ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಮನವಿ ಮಾಡಿದ್ರು.
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ರಾಮನಗರದಲ್ಲಿ 18 ಹಾಸಿಗೆಯುಳ್ಳ ಕೋವಿಡ್-19 ಆಸ್ಪತ್ರೆ ತೆರೆಯಲಾಗಿದೆ, ಅಲ್ಲದೆ ಇಲ್ಲಿನ ವೈದ್ಯರಿಗೆ ಹಾಗೂ ನರ್ಸ್‌ಗಳಿಗೆ ನುರಿತ ತಜ್ಞ ವೈದ್ಯರಿಂದ ಟ್ರೈನಿಂಗ್ ಕೊಡಿಸಲಾಗುವುದು ಎಂದರು. ಸಿಎಂ ಆದೇಶದ ಬಳಿಕ ಹಲವು ಜಿಲ್ಲೆಗಳಿಗೆ ಭೇಟಿ ಮಾಡಿದ್ದೇನೆ. ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕ ಬೇಡ. ಕೊರೊನಾ ಬಂದ್ರೆ ಸಾಯೋದಿಲ್ಲ, 141 ಕೊರೊನಾ ಶಂಕೆಯ ಪ್ರಕರಣಗಳಲ್ಲಿ ಈಗಾಗಲೇ 71 ಮಂದಿ ಗುಣಮುಖರಾಗಿದ್ದಾರೆ ಎಂದ್ರು.
ರಾಜ್ಯವೇ ಲಾಕ್‌ಡೌನ್ ಆಗಿದ್ರೂ ಜನ ಹೊರಗೆ ಬರ್ತಿದ್ದಾರೆ. ಕೆಲವೆಡೆ ಜನರ ಸೇವೆ ಮಾಡುತ್ತಿರುವ ಪೊಲೀಸರ ಮೇಲೆ ಹಲ್ಲೆ ನಡೀತಿದೆ. ನಿಮಗಾಗಿ ಪೊಲೀಸರು, ವೈದ್ಯರು 24 ಗಂಟೆಯೂ ವಿರಾಮವಿರದೇ ಕೆಲಸ ಮಾಡ್ತಿದ್ದಾರೆ, ಅರ್ಥ ಮಾಡಿಕೊಳ್ಳಿ ಎಂದ್ರು. ರಾಮನಗರದಲ್ಲಿ 250 ಹಾಸಿಗೆ ಆಸ್ಪತ್ರೆ ಇದೆ. 100 ಬೆಡ್ನ ಇನ್ನೊಂದು ಆಸ್ಪತ್ರೆಬೇಕು ಎಂದಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ದೇಶಕ್ಕೆ ಅಗತ್ಯವಾಗಿ ಬೇಕಾದ ವೆಂಟಿಲೇಟರ್ ಮತ್ತು ಇತರೆ ಸಾಮಾಗ್ರಿಗಳನ್ನ ತರಿಸಬೇಕಿದೆ. ವಿದೇಶದಿಂದ ಬೇಕಾದ ಸಲಕರಣೆ ತರಲು ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಿಂದ ಮಾತ್ರ ಕೊರೊನಾ ಹತೋಟಿ ಮಾಡಬೇಕಿದೆ. ಈವರೆಗೆ ಕೊರೊನಾ ಸೋಂಕಿಗೆ ಯಾವ ಔಷಧಿ ಸಿಕ್ಕಿಲ್ಲ. ಹೀಗಾಗಿ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಿ, ಆ ಮೂಲಕ ರೋಗ ಹರಡದಂತೆ ಎಚ್ಚರವಹಿಸಬೇಕು ಎಂದರು. ಮೈಸೂರು ಹಾಗೂ ಶಿರಾದಲ್ಲಿ ಮೃತಪಟ್ಟ ವ್ಯಕ್ತಿಗಳು ಎಲ್ಲೆಲ್ಲಿ ಸಂಚಾರ ಮಾಡಿದ್ರು ಅಂತಾ ಟ್ರೇಸ್ ಮಾಡಲಾಗುತ್ತಿದೆ. ಜೊತೆಗೆ ಅವರ ಜೊತೆಗೆ ಸಂಪರ್ಕದಲ್ಲಿದ್ದವರನ್ನೂ ತಪಾಸಣೆ ಮಾಡಲಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.