ರಾಮನಗರ: ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ, ಅದು ಬಿಜೆಪಿಯವರು ಮಾಡಿಕೊಂಡಿರುವುದು ಅಷ್ಟೇ. ರಾಮ ದೇಶದ 130 ಕೋಟಿ ಜನರ ಆಸ್ತಿ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ, ದೇಶದ 130 ಕೋಟಿ ಜನರ ಆಸ್ತಿ:ಸಂಸದ ಡಿ.ಕೆ.ಸುರೇಶ್ ನಗರದ ಬಸವನಪುರ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಇ-ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೊದಲು ಸರ್ವಾಧಿಕಾರಿ ಧೋರಣೆಯನ್ನು ಕೈಬಿಡಬೇಕು ಎಂದು ಕಿಡಿಕಾರಿದರು. ಮೋದಿಯವರು ರಾಜ್ಯ ಸರ್ಕಾರಕ್ಕಾಗಲಿ ಅಥವಾ ರಾಜ್ಯದ ಜನರಿಗಾಗಲಿ ಏನೂ ಕೊಟ್ಟಿಲ್ಲ. ನಯಾ ಪೈಸೆ ಕೂಡ ನೀಡಿಲ್ಲ. ಕೇವಲ ಭಾಷಣ ಮಾಡೋದು, ಟಿವಿಗಳಲ್ಲಿ ಪ್ರಚಾರ ಪಡೆಯೋದಷ್ಟೇ ಇವರ ಸಾಧನೆಯಾಗಿದೆ ಎಂದರು.
ರಾಜ್ಯದಲ್ಲಿ ಹಗರಣದ ಸರಮಾಲೆ ಬಿಟ್ಟರೆ, ರಾಜ್ಯ ಸರ್ಕಾರ ಏನೂ ಮಾಡಿದೆ ಎಂದು ಪ್ರಶ್ನಿಸಿದ ಡಿ.ಕೆ.ಸುರೇಶ್, ರಾಜ್ಯದಲ್ಲಿ ಒಂದೆಡೆ ಕೊರೊನಾ ಮತ್ತೊಂದೆಡೆ ಪ್ರವಾಹ ಆರಂಭವಾಗಿದೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಕೆಲಸ ಮಾಡಲಿ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಕಷ್ಟ ಎದುರಿಸಬೇಕಾಗುತ್ತದೆ ಎಂದು ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇನ್ನು, ಹವಾಮಾನ ಇಲಾಖೆ 15 ದಿನಗಳ ಹಿಂದೆಯೇ ಮಳೆಯ ಮುನ್ಸೂಚನೆ ನೀಡಿತ್ತು.ಇಷ್ಟಾದರೂ ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರ ನಡೆಸುವವರ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ ಎಂದು ಟೀಕಿಸಿದರು.