ರಾಮನಗರ: ವರ್ಷಕ್ಕೊಂದು ಬಾರಿ ಮಾತ್ರ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಹೊರಗೆ ತೆಗೆದು ಶುದ್ದೀಕರಿಸಿ ವಿಶೇಷ ಅಲಂಕಾರಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ಭೀಮನ ಅಮಾವಾಸ್ಯೆಯಂದು ದೇವಿಗೆ ಪೂಜೆ, ಆರಾಧನೆಗಳು ನಡೆಯುತ್ತವೆ.
ಭೀಮನ ಅಮಾವಾಸ್ಯೆಯಂದು ಚಾಮುಂಡಿ ದೇವಿಯ ವಿಶೇಷ ಪೂಜೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ಚಾಮುಂಡೇಶ್ವರಿಗೆ ನವ ವಧು-ವರರು ಈ ದಿನ ಪೂಜೆ ಸಲ್ಲಿಸಿದರೆ ದೈವತ್ವ ತುಂಬಿರುವ ಮಕ್ಕಳು ಹುಟ್ಟುತ್ತಾರೆ ಎಂಬುದು ಭಕ್ತರ ನಂಬಿಕೆ.
ದೇವರ ಬಸಪ್ಪ (ಆಕಳು) ನನ್ನು ಗರ್ಭ ಗುಡಿಯೊಳಗೆ ಕರೆ ತಂದು ದೇವಿಗೆ ಪೂಜೆ ಮಾಡಲಾಗುತ್ತಿದೆ. ನಂತರ ಮಡಿಕೆಯಲ್ಲಿನ ಹಾಲನ್ನು ದೇವಿಗೆ ಅರ್ಪಿಸಿ ದೇವರ ಬಸಪ್ಪನಿಗೆ ಅಭಿಷೇಕ ಮಾಡುತ್ತಾರೆ. ಭಕ್ತರಿಂದ ದೇವಿಗೆ ರಥೋತ್ಸವ, ಹೋಮ, ಹವನ, ಅಭಿಷೇಕಾದಿ ಧಾರ್ಮಿಕ ಪೂಜಾಕ್ರಿಯೆಗಳು ನೆರವೇರುತ್ತವೆ.
ರಥೋತ್ಸವ ಸಂದರ್ಭದಲ್ಲಿ ಬಗೆಬಗೆ ಹಣ್ಣು, ಹೂ ಅರ್ಪಿಸುವ ಮೂಲಕ ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ರಾಮನಗರ, ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕರು ಇಲ್ಲಿಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.