ರಾಮನಗರ: ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಾಣುವುದು ಬರೀ ಪಕ್ಷಿಗಳೇ. ಮನಸ್ಸಿಗೆ ಮುದ ನೀಡುತ್ತದೆ ಈ ಪಕ್ಷಿಗಳ ಕಲರವ.
ಪಕ್ಷಿಗಳಿಗಾಗಿಯೇ ಉತ್ತಮ ಪರಿಸರವನ್ನು ತಮ್ಮ ಮನೆಯ ಆವರಣದಲ್ಲಿಯೇ ನಿರ್ಮಿಸಿ ನೂರಾರು ಗುಬ್ಬಚ್ಚಿಗಳಿಗೆ ಇಲ್ಲೊಬ್ಬರು ಆಶ್ರಯದಾತರಾಗಿದ್ದಾರೆ. ಇವರ ಮನೆಯ ಆವರಣ ನಿತ್ಯಹರಿದ್ವರ್ಣದಂತಿದೆ. ಇದರಿಂದಾಗಿ ಗುಬ್ಬಿಗಳ ಜೊತೆಗೆ ಹತ್ತಾರು ಪಕ್ಷಿಗಳು ಬಂದು ಇಲ್ಲಿ ನೆಲೆಸಿವೆ.
ಗುಬ್ಬಚ್ಚಿಗಳ ಆಶ್ರಯದಾತ: ರಾಮನಗರ ಜಿಲ್ಲೆಯ ಕನಕಪುರದ ಮಳಗಾಳಿನ ನಿವಾಸಿ ಮರಸಪ್ಪ ರವಿಯವರ ಮನೆಯ ಆವರಣವೀಗ ಅದೆಷ್ಟೋ ಹಕ್ಕಿಗಳು ಅದ್ರಲ್ಲೂ ವಿಶೇಷವಾಗಿ ಗುಬ್ಬಿಗಳ ನೆಲೆಯಾಗಿದೆ. ಅವುಗಳನ್ನು ಪೋಷಣೆ ಮಾಡುತ್ತಿರುವ ಮರಸಪ್ಪ ರವಿ ಮತ್ತು ಅವರ ಕುಟುಂಬಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮರಸಪ್ಪ ರವಿ ಅವರ ಮನೆ ಅಂಗಳದಲ್ಲೀಗ ನೂರಾರು ಸಂಖ್ಯೆಯ ಗುಬ್ಬಚ್ಚಿಗಳು ಕಾಣಸಿಗುತ್ತವೆ. ಇವುಗಳಿಗೆ ಬೇಕಾಗುವ ಆಹಾರವನ್ನು ಇವರ ಮನೆಯಲ್ಲಿಯೇ ತಯಾರಿಸುತ್ತಾರೆ. ಇದಲ್ಲದೇ ಮನೆಯ ಆವರಣದಲ್ಲಿ ಬಿದಿರಿನ ಬೊಂಬುಗಳನ್ನು ಹಾಕಿ ಅಲ್ಲಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ಗುಬ್ಬಚ್ಚಿಗಳಿಗೆ ವಾಸ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ಜಾಗದಲ್ಲಿ ಗುಬ್ಬಚ್ಚಿಗಳು ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿವೆ.
ಗುಬ್ಬಿ ಸಂತತಿ ಕ್ಷೀಣಿಸಲು ಕಾರಣವೇನು?: ಪರಿಸರ ದಿನೇ ದಿನೆ ಹದಗೆಡುತ್ತಿದೆ. ತಂತ್ರಜ್ಞಾನಗಳು ಹೊರ ಸೂಸುವ ವಿಕಿರಣ, ಶಬ್ದ ಮಾಲಿನ್ಯ ಹಾಗೂ ಮಿತಿಮೀರಿದ ಕೀಟನಾಶಕಗಳ ಬಳಕೆಯಿಂದಾಗಿ ಗುಬ್ಬಚ್ಚಿಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿರುವುದು ಪಕ್ಷಿತಜ್ಞರ ಕಳವಳಕ್ಕೆ ಕಾರಣವಾಗಿದೆ.
'ಹಳ್ಳಿ, ಪಟ್ಟಣಗಳಲ್ಲಿರುವ ಮನೆಯ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಜೀವಿಸುವುದು ಮೊದಲೆಲ್ಲ ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಅವುಗಳು ಕಣ್ಮರೆಯಾಗುತ್ತಿವೆ. ಇದು ಪರಿಸರದ ಅವನತಿಯ ಸೂಚಕ' ಎಂದು ಮರಸಪ್ಪ ರವಿ ಆತಂಕ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ಮಾರ್ಚ್ 22ರಿಂದ ಶಿವಮೊಗ್ಗದ ಕೋಟೆ ಮಾರಿಕಾಂಬಾ ಜಾತ್ರೆ ಪ್ರಾರಂಭ
ಗುಬ್ಬಚ್ಚಿಗೊಂದು ದಿನ: ಅಳಿವಿನಂಚಿನಲ್ಲಿರುವ ಈ ಗುಬ್ಬಚ್ಚಿಗಳನ್ನು ರಕ್ಷಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನಾಚರಿಸಲಾಗುತ್ತಿದೆ. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಗಿದೆ.
ಈಟಿವಿ ಭಾರತ ಕಳಕಳಿ: ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು, ಗೌರವಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಅಳಿವಿನಂಚಿನಲ್ಲಿರುವ ಪಕ್ಷಿಗಳ ರಕ್ಷಣೆಯ ಕುರಿತು ನಮ್ಮಲ್ಲಿ ಹೆಚ್ಚಿನ ಅರಿವು ಜಾಗೃತಿ ಮೂಡಲಿ.