ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ರಾಮನಗರ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ನಗರದ ಕೋಟೆ ನಿವಾಸಿ ಮಾಧುರಿ (28) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಮಾಧುರಿ, ಕೆಲವರ ಹೆಸರನ್ನು ಹೇಳಿದ್ದಾರೆ. ಪೊಲೀಸರ ವರ್ತನೆ ಬಗ್ಗೆಯೂ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಳೆದ ಮೂರು ದಿನಗಳ ಹಿಂದೆ ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದ 28 ವರ್ಷದ ಮಾಧುರಿ, ಚಿಕಿತ್ಸೆ ಫಲಿಸದೇ ಮಂಡ್ಯದ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವಿಡಿಯೋ ಮಾಡಿ ಕೆಲವರ ಮೇಲೆ ಆರೋಪ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ. ಹಣದ ಒತ್ತಡ ಸೇರಿದಂತೆ ಕೆಲವರ ಹೆಸರು ಹೇಳಿದ್ದಾರೆ. ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂಬುದನ್ನು ಸಹ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮೃತ ಮಹಿಳೆಯ ಪತಿ ಪ್ರದೀಪ್ ಸಿಂಗ್ ಎಂಬುವರು ಈ ಬಗ್ಗೆ ದೂರು ನೀಡಿದ್ದರು. ಚನ್ನಪಟ್ಟಣ ಪುರ ಠಾಣೆಯಲ್ಲಿ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿ ಎಂಬ ಮಹಿಳೆ ಸೇರಿ ನಾಲ್ವರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದೇವೆ'' ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
''ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯ ಸಿಪಿಐ ಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈಗಾಗಲೆ ತನಿಖೆ ಕೂಡ ಪ್ರಗತಿಯಲ್ಲಿ ಇದೆ. ಮೃತ ಮಹಿಳೆ ವಿರುದ್ಧ ಕೂಡ ರಾಮನಗರ ಹಾಗೂ ಬೆಂಗಳೂರಿನ ವಿವಿದ ಠಾಣೆಯಲ್ಲಿ ಎಂಟು ಎಫ್ಐಆರ್ ದಾಖಲಾಗಿವೆ. ಮೃತ ಮಾಧುರಿ ಹಾಗೂ ಜ್ಯೋತಿ ಎಂಬುವರ ನಡುವೆ ಹಣಕಾಸಿನ ವ್ಯವಹಾರ ನಡೆದಿರುವ ಮಾಹಿತಿ ಇದೆ. ಇದೇ ಒತ್ತಡದಲ್ಲಿ ಮಾಧುರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಇದೆ. ಮೃತ ಮಹಿಳೆಯ ಗಂಡ ದೂರಿನ ಮೇರೆಗೆ ಕೇಸು ದಾಖಲಾಗಿದ್ದು, ನಮ್ಮ ಸಿಬ್ಬಂದಿ ಮೇಲೆ ಆರೋಪ ಸಾಬೀತಾದರೆ ಅವರ ವಿರುದ್ಧ ಕೂಡ ಶಿಸ್ತು ಕ್ರಮ ಜರುಗಿಸಲಾಗುವುದು'' ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ನಿದ್ದೆ ಮಾತ್ರೆ ನುಂಗಿದ್ದ ಮಾಧುರಿಯನ್ನು ಆರಂಭದಲ್ಲಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾಧುರಿ ಭಾನುವಾರ ಮೃತಪಟ್ಟರು. ಸಾವಿಗೂ ಮುನ್ನ ಮೃತ ಮಹಿಳೆ ವಿಡಿಯೋ ಮಾಡುವ ಮೂಲಕ ನನ್ನ ಸಾವಿಗೆ ನ್ಯಾಯ ಕೊಡಿಸುವಂತೆ ರಾಮನಗರ ಎಸ್ಪಿಗೆ ಮನವಿ ಮಾಡಿದ್ದಳು. ವಿಡಿಯೋ ರೆಕಾರ್ಡ್ ಮೂಲಕ ನಿದ್ದೆ ಮಾತ್ರೆ ತಿಂದು ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಳು.
ಇದನ್ನೂ ಓದಿ:ವಿಜಯಪುರ: ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ, ಇಬ್ಬರು ಕಂದಮ್ಮಗಳು ಸಾವು