ರಾಮನಗರ: ಮಠಾಧಿಪತಿಯೊಬ್ಬರು ಸನ್ಯಾಸತ್ವ ತ್ಯಜಿಸಿ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ. ಸೋಲೂರು ಗದ್ದುಗೆ ಮಠದ ಶಿವಮಹಾಂತ ಸ್ವಾಮೀಜಿ ಸನ್ಯಾಸತ್ವ ತ್ಯಜಿಸಿ ಕಾಣೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಗದ್ದುಗೆ ಮಠದ ಶಿವಮಹಾಂತ ಸ್ವಾಮೀಜಿ 'ಮಠದ ಜೀವನ ತುಂಬಾ ಬೇಸರ ತಂದಿದೆ. ಕಾವಿ ಬಟ್ಟೆ ತೊಟ್ಟು ಸೇವೆ ಮಾಡಲು ತೊಂದರೆಯಾಗುತ್ತಿದೆ' ಎಂದು ಪತ್ರದಲ್ಲಿ ಬರೆದಿದ್ದಾರೆ. ಶ್ರೀ ಶಿವಮಹಾಂತ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ಹರೀಶ್. ಸ್ವಾಮೀಜಿಯಾದ ಬಳಿಕ ಎರಡು ವರ್ಷಗಳ ಹಿಂದೆ ಸೋಲೂರು ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು.
ಸ್ವಾಮೀಜಿ ಮಠದಿಂದ ತೆರಳುವ ಮುನ್ನ ಪತ್ರವೊಂದನ್ನ ಬರೆದಿದ್ದು, ಅದರಲ್ಲಿ ನಾನು ನನ್ನ ಸ್ವಾಮೀಜಿ ಜೀವನವನ್ನ ತ್ಯಜೀಸುತ್ತಿದ್ದೇನೆ. ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ನಾನು ಇದನ್ನೆಲ್ಲಾ ಬಿಟ್ಟು ಹೊರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜುಗುಪ್ಸೆ ಉಂಟು ಮಾಡಿದೆ. ದಯವಿಟ್ಟು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆ ತ್ಯಜಿಸಿದ ಮೇಲೆ ಮತ್ತೆಂದೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ನಡೆಸಿದ್ರೆ ನನ್ನ ಸಾವನ್ನ ನೋಡಬೇಕಾಗುತ್ತದೆ. ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ದಾಂಡೇಲಿಯಲ್ಲಿ ಮೊಸಳೆ ಎಳೆದೊಯ್ದಿದ್ದ ವ್ಯಕ್ತಿ ಶವವಾಗಿ ಪತ್ತೆ