ರಾಮನಗರ:ಜಾನಪದಲೋಕದಲ್ಲಿ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆ ಹಿನ್ನೆಲೆ ಜಾನಪದ ಲೋಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಹಿರಿಯ ಜಾನಪದ ಕಲಾವಿದರಿಗೆ ಲೋಕೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.
ರಾಮನಗರದಲ್ಲಿ ಜಾನಪದ ಲೋಕದ ಬೆಳ್ಳಿಹಬ್ಬ ಸಂಭ್ರಮಾಚರಣೆ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಆಶೀರ್ವಚನ ನೀಡಿ ನಮ್ಮ ಸಂಸ್ಕೃತಿ ಪಾಶ್ಚಿಮಾತ್ಯ ಸಂಸ್ಕೃತಿಗಳಿಗಿಂತ ಶ್ರೇಷ್ಠ. ಅದಕ್ಕಾಗಿ ಎಲ್ಲರೂ ಭಾರತೀಯ ಸಂಸ್ಕೃತಿಯ ಅಪ್ಪುಗೆ ಮಾಡ್ತಾರೆ ಅಂತಹ ಸಂಸ್ಕೃತಿಯ ಉಳಿವಿಗೆ ಜಾನಪದ ಲೋಕದ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಮಾಡಿ ಗೌರವ ಸೂಚಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಜಾನಪದಲೋಕದಲ್ಲಿ ಪ್ರದರ್ಶನ ನೀಡಿದ್ದ 50 ಕ್ಕೂ ಹೆಚ್ಚು ಜಾನಪದ ಹಿರಿಯ ಕಲಾವಿದರಿಗೆ ಲೋಕೋತ್ಸವ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು.
ಈ ಸಂದರ್ಭ ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ಈಗಿನ ಕಾಲದಲ್ಲಿ ಜಾನಪದ ಕಲೆಗಳು, ಕಲಾವಿದರು ಮರೆಯಾಗುತ್ತಿದ್ದಾರೆ. ಆದರೆ, ಕಳೆದ 25 ವರ್ಷಗಳಿಂದ ಜಾನಪದ ಲೋಕದಲ್ಲಿ ಗುರುತಿಸಿಕೊಂಡಿರುವ ಕಲಾವಿದರನ್ನ ಉಳಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಅದಕ್ಕಾಗಿ ಜಾನಪದಲೋಕದ ನಿರ್ಮಾತೃ ಹೆಚ್. ಎಲ್. ನಾಗೇಗೌಡರಿಗೆ ಧನ್ಯವಾದ ತಿಳಿಸುತ್ತೇನೆಂದು ಅಭಿಪ್ರಾಯಪಟ್ಟರು.