ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ ರಾಮನಗರ:ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆ ರಾಮನಗರ ಜಿಲ್ಲೆ ಬಿಜೆಪಿ ವತಿಯಿಂದ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ ಮಾಡಲಾಯಿತು. ಚನ್ನಪಟ್ಟಣ ತಾಲೂಕಿನ ಕೆಂಗಲ್ ಹನುಮಂತರಾಯ ದೇವಸ್ಥಾನದಲ್ಲಿ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಲಾಯಿತು.
ಬಳಿಕ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮಾತನಾಡಿ, ರಾಮನಗರದ ಭಕ್ತರಿಂದ ಬೆಳ್ಳಿ ಇಟ್ಟಿಗೆ ಕೊಡಲಾಗುತ್ತಿದ್ದು, ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿದು ಶ್ರೀರಾಮ ದೇವರ ದರ್ಶನವಾಗಲಿ ಎಂದರು.
ಈ ಹಿಂದೆ ರಾಮಮಂದಿರ ಆಗಬೇಕು ಎಂಬ ಕರಸೇವಕರ ಕೂಗು ಇತ್ತು. ರಾಮ ಮಂದಿರಕ್ಕಾಗಿ ಅಂದು ಲಕ್ಷಾಂತರ ಜನ ಇಲ್ಲಿಂದ ಇಟ್ಟಿಗೆ ಹೊತ್ತಿದ್ದರು. ಆದರೆ ಈಗ ರಾಮಮಂದಿರ ಪೂರ್ಣ ಆಗುತ್ತಿದೆ. ಆದ್ದರಿಂದ ಸಾಂಕೇತಿಕವಾಗಿ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಸಮರ್ಪಿಸಲಾಗುತ್ತಿದೆ. ಅಲ್ಲದೆ ರಾಮನಗರದಲ್ಲಿ ಮುಂದಿನ ಚುನಾವಣೆ ಸಮೀಪಿಸುತ್ತಿದೆ.
ರಾಮನಗರದಲ್ಲಿ ಬಿಜೆಪಿ ಪತಾಕೆ ಹಾರಬೇಕು. ಜಿಲ್ಲೆಯಾದ್ಯಂತ ರಾಮನ ಭಕ್ತರು ಬಿಜೆಪಿಗೆ ಒಲವು ತೋರಬೇಕು. ಹಿಂದುತ್ವದ ನಾಯಕರು ಹುಟ್ಟಿಬರುವ ಜೊತೆಗೆ ಜನಪ್ರತಿನಿಧಿಗಳು ಆಗಲಿ. ಹಾಗಾಗಿ ಶ್ರೀರಾಮನಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದರು.
ಇದನ್ನೂ ಓದಿ:ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದು ಉತ್ತಮ: ಪೇಜಾವರ ಶ್ರೀ