ರಾಮನಗರ:ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ''ಕಳ್ಳಕಾಕರ ರಕ್ಷಣೆಗೆ ಈ ಸರ್ಕಾರ ಇದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿ, ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರ ನೇತೃತ್ವದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಹಲವಾರು ತೀರ್ಪುಗಳು ನಮ್ಮ ಕಣ್ಣಮುಂದೆ ಇವೆ. ಈಗಾಗಲೇ ಇದೇ ವಿಷಯವಾಗಿ ಎರಡು ಬಾರಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಆದೇಶಗಳು ಬಂದಿವೆ. ಸಿಬಿಐ ತನಿಖೆ ರದ್ದು ಕೋರಿ ಡಿ.ಕೆ. ಶಿವಕುಮಾರ್ ಅವರು ಎರಡು ಸಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ಇದು ಸಿಎಂಗೆ ಗೊತ್ತಿಲ್ಲವೇ'' ಎಂದು ಪ್ರಶ್ನಿಸಿದರು.
''ಇಂಥ ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಸರ್ಕಾರ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ತಪ್ಪು. ಇವರು ಕಾನೂನನ್ನು ಧಿಕ್ಕರಿಸಿದ್ದಾರೆ. ಕಾನೂನಿಗಿಂತ ದೊಡ್ಡವರು ಎಂಬುದನ್ನು ಅವರು ಪ್ರದರ್ಶನ ಮಾಡಿಕೊಂಡಿದ್ದಾರೆ. ಬಡವರಿಗೆ ರಕ್ಷಣೆ ಇಲ್ಲ. ಲೂಟಿ ಮಾಡುವವರಿಗೆ ಕೊಳ್ಳೆ ಹೊಡೆಯುವವರ ಪರವಾಗಿ ಸರ್ಕಾರ ಇದೆ ಎಂಬುದನ್ನು ನಿರೂಪಿಸಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಕಿಡಿ ಕಾರಿದರು.
ಸಂಪುಟ ಸಭೆಯಿಂದ ಹೊರಗುಳಿದ ಡಿಕೆಶಿ ಬಗ್ಗೆ ವ್ಯಂಗ್ಯವಾಡಿದ ಹೆಚ್ಡಿಕೆ, ''ಡಿಸಿಎಂ ಎಂತಹ ದೊಡ್ಡತನ ತೋರಿಸಿದ್ದಾರೆ ಅಂದರೆ, ತಮ್ಮ ಕೇಸ್ನ ವಿಚಾರ ಕ್ಯಾಬಿನೆಟ್ನಲ್ಲಿ ಚರ್ಚೆ ಆಗುತ್ತದೆ ಎಂದು ಕ್ಯಾಬಿನೆಟ್ ಸಭೆಯಿಂದ ಹೊರಗೆ ಉಳಿದಿದ್ದರು. ಅವರು ಸಂಪುಟ ಸಭೆಗೂ ಹೋಗಿಲ್ಲ. ಅವರ ಸಹಕಾರಕ್ಕೆ ಅಭಿನಂದಿಸಲೇಬೇಕು'' ಎಂದು ಟಾಂಗ್ ನೀಡಿದರು. ''ಡಿಸಿಎಂ ಅವರು ಕಳೆದ 3 ದಿನಗಳ ಹಿಂದೆ ಹಿರಿಯ ವಕೀಲರ ಸಭೆ ಕರೆದು, ಈ ಕೇಸ್ನಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಎಂದು ಚರ್ಚೆ ಮಾಡಿದ್ದಾರೆ. ಮೊನ್ನೆಯೇ ಈ ವಿಚಾರ ನನ್ನ ಗಮನಕ್ಕೆ ಬಂತು. ಸಂಪುಟ ಸಭೆಯ ತೀರ್ಮಾನ, ಈ ನಡವಳಿಕೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಈ ವಿಚಾರವನ್ನು ಮುಂದಿನ ಸದನದಲ್ಲಿ ಚರ್ಚೆ ಮಾಡೋಣ ಎಂದರು.