ರಾಮನಗರ:ರಾಜ್ಯದ ಜನರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಮೇಲೆ ಕೇಸ್ ಹಾಕಿದರೆ ನಾವು ಹೆದರಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಆರಂಭಿಸಿದ್ಧೇ ನಾವು. ಡಿಪಿಆರ್ ತಯಾರಿಸಿದ್ದು ಕಾಂಗ್ರೆಸ್ ಸರ್ಕಾರ. ಎರಡೂವರೆ ವರ್ಷದಿಂದ ಇವರು ಏನು ಮಾಡಿದ್ರು..? 2008ರಲ್ಲಿ ಬಿಜೆಪಿ ಸರ್ಕಾರ ಬಂತು.
ಆಗ ಯಾಕೆ ಯೋಜನೆ ಜಾರಿ ಮಾಡಲಿಲ್ಲ. ನಿಜವಾಗಿಯೂ ಕಾಳಜಿ ಇದ್ದಿದ್ದರೇ ಆಗಲೇ ಜಾರಿ ಮಾಡುತ್ತಿದ್ದರು. ಕುಡಿಯುವ ನೀರಿಗೆ ಮೊದಲು ಪ್ರಾಮುಖ್ಯತೆ ಕೊಡಬೇಕು. ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಯಾಕೆ ಯೋಜನೆ ಆರಂಭಿಸಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ನಾರಿಮನ್ ಸಲಹೆ ಪಡೆದು ಡಿಪಿಆರ್ ಸಿದ್ಧಪಡಿಸಿದ್ದವು. ಆಗ ಪರಿಸರ ಇಲಾಖೆ ಅನುಮತಿ ನೀಡಲಿಲ್ಲ. ಆದರೆ, ಈಗ ಯೋಜನೆ ಪ್ರಾರಂಭಿಸಬಹುದು, ಯಾಕೆ ವಿಳಂಬ ಮಾಡುತ್ತಿದ್ದೀರಿ?. ನಾನು ಇಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದಾರೆ. ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೇಸ್ ಹಾಕಿದರೇ ಹಾಕಿಕೊಳ್ಳಲಿ ನಾವು ಹೆದರುವುದಿಲ್ಲ ಎಂದರು.
ಬಿಜೆಪಿಗರ ಮೇಲೆ ಕೇಸ್ ಹಾಕಿದ್ದೀರಾ?
ಎಲ್ಲಾ ಕಡೆ ಬಿಜೆಪಿ ಸಭೆ ಸಮಾರಂಭ ನಡೆಯುತ್ತಿದೆ. ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಅವರ ಮೇಲೆ ಕೇಸ್ ಹಾಕಿದ್ದೀರಾ?. ಶೋಭಾ ಕರಂದ್ಲಾಜೆ ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲಾ..? ತಮಿಳುನಾಡಿನಲ್ಲಿ ಮತ ಹೆಚ್ಚಿಸಿಕೊಳ್ಳಲು ಬಿಜೆಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.