ರಾಮನಗರ : ನೂತನ ಬೆಂಗಳೂರು - ಮೈಸೂರು ಹೆದ್ದಾರಿಯ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಕಳೆದ 10 ದಿನಗಳಲ್ಲಿ 6 ಅಪಘಾತಗಳು ನಡೆದಿದ್ದು, ಅದರಲ್ಲಿ ಲಾರಿ ಪಲ್ಟಿ ಸೇರಿದಂತೆ ಕಾರು ಹಾಗೂ ದ್ವಿಚಕ್ರ ವಾಹನಗಳು ಅಪಘಾತವಾಗಿದೆ. ಅತಿವೇಗದ ಚಾಲನೆ ಮಾತ್ರವಲ್ಲದೇ ಅತಿಯಾದ ಲೋಡ್ ತುಂಬಿಕೊಂಡು ಬರುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.
ಅದರಲ್ಲೂ ಈಗ ಮೊದಲ ಹಂತದ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತಗೊಂಡಿದೆ. ಹೀಗಾಗಿ ಅತಿಯಾದ ವೇಗದಲ್ಲಿ ಲೋಡ್ ತುಂಬಿಕೊಂಡು ಬರುವ ವಾಹನಗಳು ಪಲ್ಟಿಯಾಗಿವೆ. ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಅತಿವೇಗದ ಚಾಲನೆಯೂ ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಿಂದ ಚನ್ನಪಟ್ಟಣದ ಬೈರಾಪಟ್ಟಣದವರೆಗಿನ ಸುಮಾರು 51 ಕಿ.ಮೀ ಎಕ್ಸ್‌ಪ್ರೆಸ್ ವೇ ಸಿದ್ಧಗೊಂಡಿದೆ. ಇಲ್ಲಿ ಕಳೆದ 10 ದಿನಗಳಲ್ಲಿ ತಿಟ್ಟಮಾರನಹಳ್ಳಿ ಬ್ರಿಡ್ಜ್, ಚನ್ನಪಟ್ಟಣದ ಲಂಬಾಣಿ ತಾಂಡಾದ ಹೊಸ ಬೈಪಾಸ್, ಬೈರಾಪಟ್ಟಣ ಬ್ರಿಡ್ಜ್, ದೇವರದಾಸೇಗೌಡನದೊಡ್ಡಿ ಅಂಡರ್‌ಪಾಸ್‌ನಲ್ಲಿ 2, ಕಾಡು ಮನೆ ಬಳಿಯಲ್ಲಿನ ರೈಲ್ವೆ ಬ್ರಿಡ್ಜ್ ಬಳಿ ಸೇರಿ ಒಟ್ಟು ಆರು ಕಡೆಗಳಲ್ಲಿ ಲೋಡ್ ತುಂಬಿದ ಲಾರಿಗಳು ಅಪಘಾತಕ್ಕೀಡಾಗಿದೆ. ಕಾಮಗಾರಿ ಕೊನೆ ಹಂತದಲ್ಲಿರುವಾಗ ಬೈಕ್ ಸವಾರನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಅಪಘಾತಕ್ಕೆ ಕಾರಣಗಳು :ಕಾಡುಮನೆ ಬಳಿಯಲ್ಲಿನ ರೈಲ್ವೆ ಬ್ರಿಡ್ಜ್ ಬಳಿ ಲಾರಿಯೊಂದು ಪಲ್ಟಿಯಾಗಿದ್ದು, ಇದೇ ರಸ್ತೆಯಾಗಿ ಬರುತ್ತಿದ್ದ ಐರಾವತ ಬಸ್ ರಸ್ತೆಯಲ್ಲಿ ಜಾರುತ್ತಾ ಸಾಗುವ ವಿಡಿಯೋಯೊಂದು ಜಾಲತಾಣದಲ್ಲಿ ಸದ್ದು ಮಾಡಿತ್ತು. ಇಲ್ಲಿ ರೈಲ್ವೆ ಬ್ರಿಡ್ಜ್ ಇರುವುದರಿಂದ ಕಲ್ಲುಗಳ ಬದಲಿಗೆ ಬರೀ ಡಸ್ಟ್ ಬಳಸಿ ಸುಮಾರು 500 ಮೀಟರ್‌ನಷ್ಟು ದೂರ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ 100 ಕಿ.ಮಿಗಿಂತಲೂ ಹೆಚ್ಚಿನ ಸ್ಪೀಡ್‌ನಲ್ಲಿ ಬರುವ ವಾಹನಗಳು ಸಣ್ಣಪ್ರಮಾಣದಲ್ಲಿ ಜಾರುತ್ತಿದೆ.
- 51 ಕಿ.ಮಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಎಕ್ಸ್‌ಪ್ರೆಸ್‌ವೇ ನಲ್ಲಿ 120 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ವಾಹನ ಸಂಚಾರ.
- ಲಾರಿಗಳು ಸೇರಿದಂತೆ ಸರಕು ವಾಹನಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಲೋಡ್‌ಗಳನ್ನು ಒಯ್ಯುತ್ತಿರುವುದು
- ಓವರ್ ಲೋಡ್ ತಪಾಸಣೆ ನಡೆಸದೇ ಇರುವುದು
- ಎಕ್ಸ್‌ಪ್ರೆಸ್ ವೇನಲ್ಲಿ ವೇಗದ ಮಿತಿ ಅಳವಡಿಸದಿರುವುದು.
- ರೈಲ್ವೆ ಅಂಡರ್‌ಪಾಸ್, ಬ್ರಿಡ್ಜ್‌ಗಳ ಬಳಿ ಸೂಚನಾ ಫಲಕಗಳು ಅಳವಡಿಸದೇ ಇರುವುದು
ಇದನ್ನೂ ಓದಿ :ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ