ರಾಮನಗರ:ಜಾನುವಾರು ರಕ್ಷಣೆ ವೇಳೆ ಕ್ಯಾಂಟರ್ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುನೀತ್ ಕೆರೆಹಳ್ಳಿ ತಲೆಮರಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಪ್ರಕರಣದಲ್ಲಿ ಇದುವರೆಗೂ ಯಾವುದೇ ರಾಜಕೀಯ ಒತ್ತಡ ಬಂದಿಲ್ಲ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ‘‘ಮಾರ್ಚ್ 31 ರಂದು ರಾತ್ರಿ 11:30 ಸುಮಾರಿಗೆ ಪ್ರಕರಣ ನಡೆದಿದ್ದು, ಈ ಪ್ರಕರಣ ಕುರಿತು ಸಾತನೂರು ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ. ಅಕ್ರಮ ಹಸು ಸಾಗಣೆ ಬಗ್ಗೆ ಪುನೀತ್ ಕೆರೆಹಳ್ಳಿ ಕೊಟ್ಟ ದೂರಿನ ಮೇಲೆ ಒಂದು ಎಫ್ಐಆರ್ ದಾಖಲಾಗಿದೆ. ಕ್ಯಾಂಟರ್ ಡ್ರೈವರ್ ಹಾಗೂ ಮೃತ ವ್ಯಕ್ತಿ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಎರಡು ಎಫ್ಐಆರ್ ದಾಖಲಾಗಿದ್ದು, ಮೂರು ಕೇಸ್ಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸದ್ಯ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ನಾಲ್ಕು ತಂಡಗಳನ್ನ ರಚನೆ ಮಾಡಿ ಆರೋಪಿಗೆ ಹುಡುಕಾಟ ನಡೆಸುತ್ತಿದ್ದೇವೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ನಿನ್ನೆ ಐಜಿಯವರು ಸ್ಥಳ ಪರಿಶೀಲನೆ ಮಾಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಕರಣದಲ್ಲಿ ಯಾವುದೇ ರೀತಿಯ ರಾಜಕೀಯ ಒತ್ತಡ ಇದುವರೆಗೂ ಬಂದಿಲ್ಲ’’ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಎಂದು ದೂರು ದಾಖಲಿಸಿದ ಕುಟುಂಬಸ್ಥರು