ಕರ್ನಾಟಕ

karnataka

ETV Bharat / state

ಪ್ರಪ್ರಥಮ ಬಾರಿಗೆ ಡ್ರೋನ್ ತಂತ್ರಜ್ಞಾನದಿಂದ ಗ್ರಾಮೀಣ ಪ್ರದೇಶದ ಭೂಮಾಪನ - ಗ್ರಾಮೀಣ ವಸತಿ ಪ್ರದೇಶಗಳ ಆಸ್ತಿಯ ಗಡಿ

ಗ್ರಾಮೀಣ ವಸತಿ ಪ್ರದೇಶಗಳ ಆಸ್ತಿಯ ಗಡಿಗಳನ್ನು ನಿರ್ಧರಣೆ ಮಾಡಿ ಸ್ಥಳದಲ್ಲೇ ಆಸ್ತಿಯ ಹಕ್ಕು ದಾಖಲಿಸುವುದು ಹಾಗೂ ಆಸ್ತಿ ಮಾಲೀಕರಿಗೆ ನಕ್ಷೆ ಸಹಿತ ಆಸ್ತಿ ಪತ್ರಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Rural area survey
ರಾಮನಗರ

By

Published : Feb 14, 2021, 2:55 PM IST

ರಾಮನಗರ: ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ವಸತಿ ಪ್ರದೇಶಗಳ ಜಮೀನಿನ ಭೂಮಾಪನ ಸರ್ವೇ ನಡೆಸಿ, ಆಸ್ತಿ ಪತ್ರಗಳನ್ನು ವಿತರಿಸುವ ಸಲುವಾಗಿ ಹೊಸ ಯೋಜನೆ ಜಾರಿಯಾಗಿದೆ‌. ಈ ಮೂಲಕ ಗ್ರಾಮದ ಗಡಿ ಹಾಗೂ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಸಂಪೂರ್ಣ ನೆರವಾಗಲಿದೆ. ಹಾಗಾದ್ರೆ ಈ ಪೈಲಟ್ ಪ್ರಾಜೆಕ್ಟ್ ಪ್ರಾರಂಭವಾಗಿರುವ ಜಿಲ್ಲೆ ಯಾವುದು ಗೊತ್ತಾ, ಈ ವರದಿ ನೋಡಿ....

ಡ್ರೋಣ್ ತಂತ್ರಜ್ಞಾನ ಬಳಸಿಕೊಂಡು ಗ್ರಾಮೀಣ ಪ್ರದೇಶದ ಭೂಮಾಪನ

ಇದು ರೇಷ್ಮೆನಗರಿ ರಾಮನಗರ. ಇಲ್ಲಿ ರಾಜ್ಯದಲ್ಲೇ ಪ್ರಥಮ ಪೈಲಟ್ ಪ್ರಾಜೆಕ್ಟ್ ಆಗಿ ಡ್ರೋನ್ ಮೂಲಕ‌ ಗ್ರಾಮೀಣ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಗಡಿ, ಆಸ್ತಿ ಸರ್ವೇ ನಡೆಸಲು ಕೇಂದ್ರ ಸರ್ಕಾರ ಸ್ವಾಮಿತ್ವ ಸರ್ವೇ ಯೋಜನೆ ಜಾರಿಗೊಳಿಸಿದೆ. ದೇಶಾದ್ಯಂತ ಈ ಯೋಜನೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರಾಯೋಗಿಕವಾಗಿ ರಾಜ್ಯದಲ್ಲಿ ಪ್ರಥಮ ಭಾರಿಗೆ ರಾಮನಗರ ಜಿಲ್ಲೆಯಿಂದಲೇ ಸರ್ವೇ ಕಾರ್ಯ ಆರಂಭಗೊಂಡಿದೆ.

ಗ್ರಾಮೀಣ ವಸತಿ ಪ್ರದೇಶಗಳ ಆಸ್ತಿಯ ಗಡಿಗಳನ್ನು ನಿರ್ಧರಣೆ ಮಾಡಿ ಸ್ಥಳದಲ್ಲೇ ಆಸ್ತಿಯ ಹಕ್ಕು ದಾಖಲಿಸುವುದು ಹಾಗೂ ಆಸ್ತಿ ಮಾಲೀಕರಿಗೆ ನಕ್ಷೆ ಸಹಿತ ಆಸ್ತಿ ಪತ್ರಗಳನ್ನು ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆ ಜಾರಿಯಿಂದ ಆಗುವ ಅನುಕೂಲಗಳೇನು...!

  • ಈ ಯೋಜನೆಯ ಅನುಷ್ಠಾನದಿಂದ ಆಸ್ತಿ ಮಾಲೀಕರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಸುಲಭ.
  • ಹಣಕಾಸು ಸಂಸ್ಥೆಗಳು ಈ ದಾಖಲೆಗಳ ಖಾತ್ರಿಯಿಂದಾಗಿ ಜನರಿಗೆ ಹೆಚ್ಚಿನ ಹಣಕಾಸು ಸೇವೆ ಒದಗಿಸಲು ಅನುಕೂಲ.
  • ಪ್ರತಿಯೊಂದು ಆಸ್ತಿಯ ಆಸ್ತಿ ತೆರಿಗೆಯನ್ನು ಸ್ಪಷ್ಟವಾಗಿ ಮತ್ತು ವೈಜ್ಞಾನಿಕವಾಗಿ ನಿರ್ಧರಿಸಲು ಸಾಧ್ಯ
  • ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಿ ನಾಗರಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸಲು ಸಾಧ್ಯ. ಆಸ್ತಿಯ ಮಾಲೀಕರು ಕಟ್ಟಡ ಪರವಾನಗಿಯನ್ನು ಪಡೆಯುವ ಪ್ರಕ್ರಿಯೆ ಸರಳವಾಗುತ್ತೆ.
  • ಸರ್ಕಾರಿ ಆಸ್ತಿಯಲ್ಲಿನ ಅಕ್ರಮ ಸ್ವಾಧೀನವನ್ನು ತೆರವುಗೊಳಿಸಬಹುದು.

ಈ ಯೋಜನೆಯನ್ನು ಕೇಂದ್ರ ಸರ್ಕಾರವು ಸರ್ವೆ ಆಫ್ ಇಂಡಿಯಾ ಸಂಸ್ಥೆ ಹಾಗೂ ರಾಜ್ಯದ ಕಂದಾಯ ಇಲಾಖೆ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 5 ಜಿಲ್ಲೆಗಳ 83 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಪೈಲಟ್ ಯೋಜನೆಯಾಗಿ ರಾಮನಗರ ತಾಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ 6 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಭೂಮಾಪಕರು ಪ್ರತಿಯೊಂದು ಆಸ್ತಿಯ ಗಡಿಗಳನ್ನು ಆಸ್ತಿಯ ಮಾಲೀಕರ ಸಮ್ಮುಖದಲ್ಲಿ ಪರಿಶೀಲಿಸಿ, ಗಡಿಗಳ ಅಂಚುಗಳನ್ನು ಸುಣ್ಣದಲ್ಲಿ ಗುರುತಿಸುವರು.

ಆಸ್ತಿಯ ಗಡಿಗಳನ್ನು ಗುರುತಿಸಿದ ನಂತರ ಡ್ರೋನ್ ಮೂಲಕ ಗ್ರಾಮದ ಆಸ್ತಿಗಳ ಛಾಯಾಚಿತ್ರವನ್ನು ಸೆರೆ ಹಿಡಿಯಲಾಗುವುದು. ಈ ಛಾಯಾಚಿತ್ರಗಳನ್ನು ಸಂಸ್ಕರಿಸಿ, ಸುಣ್ಣದಲ್ಲಿ ಗುರುತಿಸಲಾದ ಅಂಚುಗಳನ್ನು ಆಧರಿಸಿ ಪ್ರತಿಯೊಂದು ಆಸ್ತಿಯ ನಕ್ಷೆ ತಯಾರಿಸಿ, ನಕ್ಷೆಯನ್ನು ಜಮೀನಿನೊಂದಿಗೆ ತಾಳೆ ಮಾಡಲಾಗುವುದು. ಅನಂತರ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಆಸ್ತಿ ಮಾಲೀಕರಿಂದ ದಾಖಲೆಗಳನ್ನು ಪಡೆದುಕೊಂಡು ನಕ್ಷೆ ಮತ್ತು ಕರಡು ಆಸ್ತಿ ಪತ್ರವನ್ನು ಸಿದ್ಧಪಡಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾಗುವುದು ಎಂದು ಸಿಇಒ ತಿಳಿಸುತ್ತಾರೆ.

ಒಟ್ಟಾರೆ ರಾಜ್ಯದಲ್ಲೆ ಪ್ರಥಮವಾಗಿ ಸ್ವಾಮಿತ್ವ ಯೋಜನೆ ಜಾರಿಗೊಳಿಸಿದ ಹೆಗ್ಗಳಿಕೆಗೆ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಸಲ್ಲುತ್ತೆ. ಇದೇ ಮಾದರಿಯಲ್ಲಿ ಇತರೆ ಜಿಲ್ಲೆಗಳಿಗೂ ಸ್ವಾಮಿತ್ವ ಸರ್ವೇ ಯೋಜನೆ ಜಾರಿಯಾಗಲಿ ಎಂದು ನಮ್ಮ ಹಾರೈಕೆ.

ABOUT THE AUTHOR

...view details