ಆಮಂತ್ರಣ ಪತ್ರಿಕೆ ಹಂಚಿಕೆ ಬಗ್ಗೆ ಸಂಸದ- ಸಚಿವರ ನಡುವೆ ಜಟಾಪಟಿ ರಾಮನಗರ:ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ತಮ್ಮನ್ನು ಬಿಟ್ಟು ಉದ್ಘಾಟಿಸಿದ್ದಕ್ಕೆ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಿಗೆ ಪ್ರೋಟೋಕಾಲ್ ಸರಿಯಾಗಿ ಪಾಲಿಸಲಿ ಆಗಲ್ವಾ? ಎಂದು ಕಿಡಿ ಕಾರಿದ್ದಾರೆ. ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್, ಸಚಿವ ಡಾ.ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಮಾತಿನ ಚಕಮಕಿಯೂ ನಡೆಯಿತು. ಆಸ್ಪತ್ರೆಯ ಒಳಾಂಗಣದಲ್ಲಿ ಕಾರ್ಯಕ್ರಮ ಆಯೋಜಕರು, ಡಿಸಿ ಹಾಗೂ ಸಚಿವರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ನೂತನ ಜಿಲ್ಲಾಸ್ಪತ್ರೆ:ರಾಮನಗರದ ಜಿಲ್ಲಾ ಪಂಚಾಯಿತಿ ಪಕ್ಕದ ಜಾಗದಲ್ಲಿ ಸುಮಾರು 99.93 ಕೋಟಿ ರೂ. ವೆಚ್ಚದಲ್ಲಿ ನೂತನ ಜಿಲ್ಲಾಸ್ಪತ್ರೆ ನಿರ್ಮಾಣಗೊಂಡಿದೆ. ಆಸ್ಪತ್ರೆ ಆವರಣವು 5.20 ಗುಂಟೆ ವಿಸ್ತೀರ್ಣ ಹೊಂದಿದೆ. 1.61 ಗುಂಟೆಯಲ್ಲಿ ಕಟ್ಟಡ ವಿಸ್ತರಿಸಿದೆ. ರಾಮನಗರ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದು 16 ವರ್ಷ ಕಳೆದ ನಂತರ ಸುಸಜ್ಜಿತ ಜಿಲ್ಲಾಸ್ಪತ್ರೆ ಇದೀಗ ನಿರ್ಮಾಣವಾಗಿದೆ. ಇಲ್ಲಿ ಒಟ್ಟು 26 ವಿಭಾಗಗಳು ಕಾರ್ಯನಿರ್ವಹಿಸುತ್ತವೆ.
ನೂತನ ಜಿಲ್ಲಾಸ್ಪತ್ರೆಯು 5 ಅಂತಸ್ತುಗಳನ್ನು ಹೊಂದಿದೆ. 374 ಹಾಸಿಗೆಗಳ ಮಂಜೂರಾತಿ ಸಾಮರ್ಥ್ಯಕ್ಕೆ ಕಟ್ಟಡ ಕಟ್ಟಲಾಗಿದೆ. ಆದರೆ ಸದ್ಯಕ್ಕೆ 250 ಹಾಸಿಗೆಗಳ ಕಾರ್ಯಾಚರಣೆಗೆ ಸಿದ್ದವಾಗಿದೆ. ಇದಲ್ಲದೇ ಪಕ್ಕದಲ್ಲಿರುವ ಕಂದಾಯ ಭವನದ ಕಟ್ಟಡವನ್ನು ಇಲಾಖೆ ವಶಕ್ಕೆ ನೀಡಿದ್ದಲ್ಲಿ (ಸ್ಕೈ ವಾಲ್ಕ್ ) ನಿರ್ಮಾಣ ಮಾಡಿಕೊಂಡು ಹೆಚ್ಚುವರಿಯಾಗಿ ಕಂದಾಯ ಭವನದಲ್ಲಿ 126 ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ ಒಟ್ಟು 500 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಾಗಿ ನಿರ್ವಹಣೆ ಮಾಡಲು ಅವಕಾಶವಿದೆ.
ಆಸ್ಪತ್ರೆ ಕಟ್ಟಡದಲ್ಲಿ ಒಂದು ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಮ್ಲಜನಕ ಉತ್ಪಾದಿಸುವ ಆಮ್ಲಜನಕ ಉತ್ಪಾದನಾ ಘಟಕ (ಪಿಎಸ್‍ಎ ಪ್ಲಾಂಟ್) ಸುಸಜ್ಜಿತವಾಗಿದ್ದು ಕಾರ್ಯ ನಿರ್ವಹಣೆಯಲ್ಲಿದೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‍ಎಂಒ ಟ್ಯಾಂಕ್) 19 ಕೆ.ಎಲ್.ಡಿ ಸಾಮರ್ಥ್ಯವಿದ್ದು ಅವಶ್ಯವಿರುವ ರೋಗಿಗಳಿಗೆ ಸರಬರಾಜು ಮಾಡುವ ಸ್ಥಿತಿಯಲ್ಲಿದೆ. ಒಳಚರಂಡಿ ಸಂಸ್ಕರಣಾ ಘಟಕವು (ಎಸ್‍ಟಿಪಿ) 300 ಕೆ.ಎಲ್.ಡಿ ಸಾಮರ್ಥ್ಯ, ತ್ಯಾಜ್ಯ ನೀರಿನ ಸಂಸ್ಕರಣ ಘಟಕ (ಇಟಿಪಿ) 30 ಕೆ.ಎಸ್.ಡಿ ಸಾಮರ್ಥ್ಯ, ಡೀಸೆಲ್ ಜನರೇಟರ್ 800 ಕೆ.ವಿ.ಎ ಸಾಮರ್ಥ್ಯ ಮತ್ತು ನೀರು ಸಂಗ್ರಹಣ ಘಟಕ 300 ಕೆ.ಎಲ್.ಡಿ (ಯುಜಿ ಸಂಪ್) ಸೌಲಭ್ಯಗಳನ್ನು ಆಸ್ಪತ್ರೆ ಕಟ್ಟಡ ಒಳಗೊಂಡಿದೆ.
ಶಸ್ತ್ರ ಚಿಕಿತ್ಸಾ ಕೊಠಡಿಗಳು, ಐಸಿಯು ವಿಭಾಗ ಸೇರಿದಂತೆ ಕೆಲವೊಂದು ವಿಭಾಗಗಳನ್ನು ಸೋಂಕು ರಹಿತವಾಗಿ ಮಾಡಬೇಕಾಗಿದ್ದು ಸ್ವಾಬ್ ಸಂಗ್ರಹಿಸಿ ಕಲ್ಚರ್ ಪರೀಕ್ಷೆಗೆ ಕಳುಹಿಸಿ ಪರೀಕ್ಷೆಯ ವರದಿಯು ಸೋಂಕು ರಹಿತವಾಗಿ ಬಂದ ನಂತರ ನೂತನ ಜಿಲ್ಲಾಸ್ಪತ್ರೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಳೆಯ ಜಿಲ್ಲಾಸ್ಪತ್ರೆ ಕಟ್ಟಡವು ಹೆರಿಗೆ ಜಿಲ್ಲಾಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ.
ವಿಭಾಗಗಳು:ತುರ್ತು ಚಿಕಿತ್ಸಾ ವಿಭಾಗ, 4 ಮೇಜರ್ ಶಸ್ತ್ರ ಚಿಕಿತ್ಸಾ ವಿಭಾಗ, 5 ಮೈನರ್ ಶಸ್ತ್ರ ಚಿಕಿತ್ಸಾ ವಿಭಾಗ, ವೈದ್ಯಕೀಯ ವಿಭಾಗ, ಐಸಿಯು ವಿಭಾಗ (ಮೆಡಿಕಲ್ ಮತ್ತು ಸರ್ಜಿಕಲ್), ಜನರಲ್ ಸರ್ಜರಿ ವಿಭಾಗ, ಯುರಾಲಜಿ, ರೇಡಿಯಾಲಜಿ, ನೇತ್ರ ಚಿಕಿತ್ಸಾ ವಿಭಾಗ, ಇಎನ್ಟಿ, ದಂತ ಚಿಕಿತ್ಸಾ, ಮಕ್ಕಳ ವಿಭಾಗ, ಅರ್ಥೋಪೆಡಿಕ್, ಚರ್ಮರೋಗ, ಮನೋರೋಗ, ಎಸ್ಎನ್ಸಿಯು, ಎನ್ಆರ್ಸಿ, ಎನ್ಐಸಿಯು, ಪಿಐಸಿಯು, ಪ್ರಯೋಗ ಶಾಲಾ ವಿಭಾಗ, ಫಾರ್ಮಾಸಿ, ಐಸಿಟಿಸಿ, ಎಆರ್ಟಿ, ಬ್ಲಡ್ ಬ್ಯಾಂಕ್ , ಸ್ಪಾಸ್ಟಿಕ್ ಸೊಸೈಟಿ ಹಾಗೂ ನೆಲ ಮಹಡಿ – (41 ಹಾಸಿಗೆಗಳು) ಹೊರ ರೋಗಿಗಳ ದಾಖಲಾತಿ ವಿಭಾಗ, ಹೊರ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಾರ್ಡ್, ಲಘು ಶಸ್ತ್ರ ಚಿಕಿತ್ಸಾ ಕೊಠಡಿ, ಔಷಧ ವಿತರಣಾ ವಿಭಾಗ, ವೈದ್ಯಕೀಯ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ರೇಡಿಯೋಲಜಿ, ಪ್ರಯೋಗಾಲಯ, ಕ್ಷ – ಕಿರಣ ವಿಭಾಗ, ಸೀ ರೋಗ, ಮಕ್ಕಳ ಚಿಕಿತ್ಸಾ ವಿಭಾಗಗಳಿವೆ.
ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ನಂತರವೂ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಣ್ಣಪುಟ್ಟ ಚಿಕಿತ್ಸೆ ಹೊರತುಪಡಿಸಿದರೆ ರೋಗಿಗಳಿಗೆ ಸಿಗಬೇಕಾದ ಚಿಕಿತ್ಸೆ ಸಿಗುತ್ತಿರಲಿಲ್ಲ. ಹೀಗಾಗಿ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ನಿತ್ಯವೂ ಪರದಾಡಿ ಬೆಂಗಳೂರು, ಮಂಡ್ಯ ಹಾಗೂ ಮೈಸೂರಿಗೆ ತೆರಳುತ್ತಿದ್ದರು. ಇದೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ನಾಲ್ಕೈದು ವರ್ಷಗಳ ಹಿಂದೆಯೇ ನೂತನ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು. ಆದರೀಗ ಹೈಟೆಕ್ ಜಿಲ್ಲಾಸ್ಪತ್ರೆಯ ನಿರ್ಮಾಣ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೂತನ ಜಿಲ್ಲಾಸ್ಪತ್ರೆ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ, ಸಂಸದ ಡಿ.ಕೆ.ಸುರೇಶ್ ಹಾಜರಿದ್ದರು.
ಇದನ್ನೂ ಓದಿ:ಏನ್ರೀ ಇದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ಕರ್ತವ್ಯಕ್ಕೆ ಹಾಜರಾಗ್ತಿಲ್ಲ..