ರಾಮನಗರ: ಅದು ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ. ಪ್ರತಿನಿತ್ಯ ಸಾವಿರಾರು ರೈತರು ಅಲ್ಲಿ ರೇಷ್ಮೆಗೂಡು ಮಾರಾಟ ಮಾಡುವ ಮಾರುಕಟ್ಟೆ. ಆದ್ರೆ ಇದೀಗ ಆ ಮಾರುಕಟ್ಟೆಯಲ್ಲಿ ಅಕ್ರಮದ ವಾಸನೆ ಎದ್ದಿದೆ. ಆನ್‌ಲೈನ್ ಪೇಮೆಂಟ್ ಹೆಸರಿನಲ್ಲಿ ಮಾರುಕಟ್ಟೆಯ ಉಪನಿರ್ದೇಶಕರೇ ನೂರಾರು ರೈತರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇತ್ತೀಚಿಗೆ ರೈತರ ಅನುಕೂಲಕ್ಕಾಗಿ ಆನ್‍ಲೈನ್ ಪೇಮೆಂಟ್ ಜಾರಿಗೆ ತರಲಾಗಿತ್ತು. ರೀಲರ್ಸ್‍ಗಳು ಖರೀದಿಸಿದ ಗೂಡಿನ ಹಣವನ್ನು ಮಾರುಕಟ್ಟೆ ಅಧಿಕಾರಿಗಳು ರೈತರಿಗೆ ಸಂದಾಯ ಮಾಡುತ್ತಿದ್ದರು.
ರಾಮನಗರ ರೇಷ್ಮೆ ಇಲಾಖೆಯಲ್ಲಿ ಗೊಲ್ ಮಾಲ್ ಉಪನಿರ್ದೇಶಕ ನಾಪತ್ತೆ!
ಕಳೆದ ಶುಕ್ರವಾರದಿಂದ ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಮುನ್ಷಿ ಬಸಯ್ಯ ನಾಪತ್ತೆಯಾಗಿದ್ದಾರೆ. ಮೂರು ದಿನದ ಹಿಂದೆ ಕರ್ತವ್ಯ ಮುಗಿಸಿ ಮನೆಗೆ ಎಂದು ಹೋಗಿದ್ದ ಅಧಿಕಾರಿ ಮನೆಗೂ ಹೋಗಿಲ್ಲ ಕಡತಗಳೊಂದಿಗೆ ಅಧಿಕಾರಿ ನಾಪತ್ತೆಯಾಗಿದ್ದಾರೆ.
1.5 ಕೋಟಿ ರೂ. ಹಣ ರೈತರಿಗೆ ನೀಡಬೇಕು
ಸುಮಾರು 400ಕ್ಕೂ ಹೆಚ್ಚು ರೈತರಿಗೆ ಆನ್ಲೈನ್ನಲ್ಲಿ ಹಣ ಸಂದಾಯ ಮಾಡಿಲ್ಲ. ಬರೋಬ್ಬರಿ ಅಂದಾಜು 1.5 ಕೋಟಿ ರೂ ಹಣ ರೈತರಿಗೆ ನೀಡಬೇಕೆಂಬ ಅಂದಾಜು ಮಾಡಲಾಗಿದೆ. ಗೂಡು ಖರೀದಿಸಿದ ಬಳಿಕ ರೀಲರ್ಸ್‍ಗಳು ಹಣ ಸಂದಾಯ ಮಾಡಿಲ್ಲವೋ ಅಥವಾ ಸಂದಾಯವಾದ ಹಣವನ್ನು ಮುನ್ಷಿ ಬಸಯ್ಯ ರೈತರಿಗೆ ಕೊಟ್ಟಿಲ್ಲವೋ ಎಂಬ ಗೊಂದಲವೂ ಮಾರುಕಟ್ಟೆಯಲ್ಲಿ ಏರ್ಪಟ್ಟಿದೆ. ಇದೀಗ ಮೇಲ್ನೋಟಕ್ಕೆ ಉಪನಿರ್ದೇಶಕ ಮುನ್ಷಿ ಬಸಯ್ಯ ಅವರಿಂದಲೇ ಕರ್ತವ್ಯ ಲೋಪವಾಗಿದೆ ಎಂದು ರೇಷ್ಮೆ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್.ವನಿತಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಂದಹಾಗೆ, ರಾಮನಗರದ ರೇಷ್ಮೆ ಮಾರುಕಟ್ಟೆ ವಹಿವಾಟಿನಲ್ಲಿ ಏಷ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹೀಗಾಗಿ ನಿತ್ಯ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲು ಗೂಡು ಮಾರಾಟಕ್ಕೆ ರೈತರು ಆಗಮಿಸುತ್ತಿದ್ದರು. ಇವರಿಗೆ ಅನಕೂಲವಾಗಲೆಂದು ಆನ್‍ಲೈನ್ ಪೇಮೆಂಟ್ ಜಾರಿಗೆ ತರಲಾಗಿತ್ತು. ಹಣ ಸಂದಾಯವಾಗಿಲ್ಲ ಎಂಬ ಕಾರಣಕ್ಕಾಗಿ ರೈತರು ಮಾರುಕಟ್ಟೆಯಲ್ಲಿ ಹಲವು ಬಾರಿ ಗಲಾಟೆಯೂ ಸಹ ಮಾಡುತ್ತಿದ್ದರು. ಇವತ್ತು ಸಹ ರೈತರು ಅಧಿಕಾರಿಗಳನ್ನ ಭೇಟಿ ಮಾಡಿ ಹಲವು ದಿನಗಳ ಹಿಂದೆಯೇ ಗೂಡು ಮಾರಾಟ ಮಾಡಲಾಗಿದೆ. ಆದ್ರೆ, ಇದುವರೆಗೆ ಹಣ ಮಾತ್ರ ಖಾತೆಗೆ ಜಮೆಯಾಗಿಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ರು.
ನಾಪತ್ತೆಯಾಗಿರುವ ನಿರ್ದೇಶಕರ ಹುಡುಕಾಟ
ಇನ್ನು ಮುನ್ಷಿಬಸಯ್ಯ ಕಾಣೆಯಾಗಿದ್ದಾರೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲು ಸಹ ಮಾಡಿದ್ದಾರೆ. ದೂರು ಕೊಟ್ಟ ಹಿನ್ನೆಲೆಯಲ್ಲಿ ಆರ್.ಆರ್ ನಗರ ಪೊಲೀಸರು ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ಮುನ್ಷಿಬಸಯ್ಯ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.