ರಾಮನಗರ: ಬೊಂಬೆನಾಡು ಚನ್ನಪಟ್ಟಣದಲ್ಲಿ ಬಮೂಲ್ ಉತ್ಸವ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂಬ ವಿಷಯಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಆರೋಪ ಪ್ರತ್ಯಾರೋಪ ಮುಂದುವರೆದಿದೆ.
ಈ ನಡುವೆ ಫೆ.27ಕ್ಕೆ ಬಮೂಲ್ ಉತ್ಸವ ಮಾಡೋದಕ್ಕೆ ಜೆಡಿಎಸ್ ಸಜ್ಜಾಗಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಹಾಲಿ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ನಾಮನಿರ್ದೇಶಕ ಲಿಂಗೇಶ್ ಕುಮಾರ್ ಹೆಸರು ಹಾಕದಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕಾರ್ಯಕ್ರಮ ನಡೆಯುವ ದಿನ ವೇದಿಕೆಯ ಮುಂಭಾಗವೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಬಿಜೆಪಿ ಮುಖಂಡರು ನೀಡಿದ್ದಾರೆ.
ಬಮೂಲ್ ಉತ್ಸವಕ್ಕೆ ಸಜ್ಜು:ಬೊಂಬೆನಾಡು ಚನ್ನಪಟ್ಟಣ ಹೈನೋದ್ಯಮದಿಂದ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕು ಎಂಬ ಹೆಸರಿಗೆ ಪಾತ್ರವಾಗಿದೆ. ಪ್ರತಿ ದಿನ 2 ಲಕ್ಷ ಲೀಟರ್ ಹಾಲು ಇದೊಂದೇ ತಾಲೂಕಿನಿಂದ ಬೆಂಗಳೂರು ಡೈರಿಗೆ ಸರಬರಾಜು ಮಾಡುವ ಕೀರ್ತಿ ಪಡೆದಿದೆ. ಇದರ ಜೊತೆಗೆ ತಾಲೂಕಿನಲ್ಲಿ 19 ಸಾವಿರಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆಯನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈನುಗಾರರನ್ನ ಒಂದೆಡೆ ಸೇರಿಸುವ ಉದ್ದೇಶದಿಂದ ಬಮೂಲ್ ಉತ್ಸವ ಮಾಡಲು ಸಜ್ಜಾಗಿದೆ.
ಇದರಿಂದಲೇ ಫೆ.27ರಂದು ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಬಮೂಲ್ ಉತ್ಸವಕ್ಕೆ ಸಜ್ಜು ಮಾಡಲಾಗಿದ್ದು, ಹೈನುಗಾರರ ದೊಡ್ಡ ಮಟ್ಟದ ಕಾರ್ಯಕ್ರಮ ಬೃಹತ್ ವೇದಿಕೆ ಮಾಡಲು ಹೊರಟಿದ್ದಾರೆ. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗಿಯಾಗಲಿದ್ದಾರೆಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದು, ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ರೈತರಿಗೆ ಅನುಕೂಲವಾಗಲೆಂದು ಈ ಉತ್ಸವನ್ನ ಹಮ್ಮಿಕೊಳ್ಳಲಾಗಿದೆ ಎಂಬುದು ಜೆಡಿಎಸ್ ಮುಖಂಡ ಜಯುಮುತ್ತು ಅವರ ಅಭಿಪ್ರಾಯವಾಗಿದೆ.
ಉತ್ಸವದಲ್ಲಿ ಕೃಷಿ, ಆರೋಗ್ಯ, ಉದ್ಯೋಗ ಮೇಳ ಆಯೋಜನೆ:ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ರೈತ ಮಕ್ಕಳಿಗೆ ಅನುಕೂಲವಾಗಲೆಂದು ಈ ಉತ್ಸವದಲ್ಲೇ ಬೃಹತ್ ಉದ್ಯೋಗ ಮೇಳವನ್ನ ಕೂಡ ಆಯೋಜನೆ ಮಾಡಲಾಗಿದೆ. 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಸಹಯೋಗದಲ್ಲಿ ಈ ಮೇಳ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಲಾಗಿದೆ.
ಜೊತೆಗೆ ರೈತರಿಗೆ ಅನುಕೂಲವಾಗಲೆಂದು ಕೃಷಿ ಮೇಳ ಹಾಗೂ ವಿಶೇಷ ರಾಸುಗಳ ಪ್ರದರ್ಶನವನ್ನ ಸಹ ಹಮ್ಮಿಕೊಳ್ಳಲಾಗಿದೆ, ಮೇಳದಲ್ಲಿ ಕೃಷಿಗೆ ಸಂಬಂದಿಸಿದ ವಿವಿದ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಹಾಗೂ ಖಾಸಗಿ ಕಂಪನಿಗಳಿಂದ ದೊರೆಯುವ ಸೌಲಭ್ಯಗಳು ಹಾಗೂ ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕೂಡ ನೀಡಲಾಗುತ್ತದೆಂದು ಜಯಮುತ್ತು ತಿಳಿಸಿದ್ದಾರೆ.