ರಾಮನಗರ:ರಾಮನಗರ ಜಿಲ್ಲೆಯಿಂದ ಉಸ್ತುವಾರಿ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶಕ್ಕೆ ತೆರಳಿರುವ 150 ಯಾತ್ರಾರ್ಥಿಗಳ ತಂಡವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಿಯೋಗದ ಜತೆಗಿದ್ದ ಅವರು, ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಂಡು, ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಯೋಗಿ ಅವರಿಗೆ ರಾಮನಗರದಲ್ಲಿ ತಯಾರಿಸಿದ ರೇಷ್ಮೆ ಶಾಲು, ಹಾರ ಮತ್ತು ಪೇಟಗಳನ್ನು ಹಾಕಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಕರ್ನಾಟಕದ ಆದಿಚುಂಚನಗಿರಿ ಮಠ, ಕಾಲಬೈರವ ಮತ್ತು ಮಂಜುನಾಥ ಸ್ವಾಮಿ ಹಾಗೂ ಉತ್ತರ ಪ್ರದೇಶದ ನಡುವೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಸಂಬಂಧವಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಗಟ್ಟಿ ಆಗುತ್ತಿದೆ. ಇದಲ್ಲದೆ ಎರಡೂ ರಾಜ್ಯಗಳಲ್ಲಿ ನಾಥ ಸಂಪ್ರದಾಯದ ಪ್ರಭಾವ ಇದೆ. ನಮ್ಮ ನಡುವೆ ಕೊಡುಕೊಳ್ಳುವಿಕೆ ಮತ್ತಷ್ಟು ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.