ರಾಮನಗರ:ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, 481 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೂನ್ 14ರಂದು ಪಾಸಿಟಿವಿಟಿ ದರ ಶೇ1.1 ಇದ್ದು, ಕಳೆದ 7 ದಿನಗಳಿಂದ ಶೇ 2.75ರಷ್ಟು ಹಾಗೂ 15 ದಿನಗಳಿಂದ ಶೇ 4.52ರಷ್ಟು ಇರುತ್ತದೆ. ನಿತ್ಯ ಸರಾಸರಿ 18500-1800 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರ ಕನಿಷ್ಠ 8 ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 824 ಗ್ರಾಮಗಳ ಪೈಕಿ 757 ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಿ ಕೋಮಾರ್ಬಿಡಿಟಿ ಹಾಗೂ ಕೋವಿಡ್ ಲಕ್ಷಣ ಇರುವ 16,933 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಇದಕ್ಕಾಗಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಿಂದ ನಿಯೋಜಿಸಲಾದ 44 ಔಟ್ ಸರ್ಜನ್ ವೈದ್ಯರು ಸಹಕಾರಿ ನೀಡಿರುತ್ತಾರೆ. ಶಿಬಿರದಲ್ಲಿ 412 ಸೋಂಕಿತರನ್ನು ಪತ್ತೆ ಹಚ್ಚಾಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 20 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೆಲವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ತಾಲೂಕಿನಲ್ಲಿ 1 ಅಥವಾ 2 ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಂಡು ಉಳಿದ ಕೋವಿಡ್ ಕೇರ್ ಸೆಂಟರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಕರಣಗಳು ಹೆಚ್ಚಾದಲ್ಲಿ ಪುನಃ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಹಾಗೂ ಉತ್ಪಾದನಾ ಘಟಕಗಳು ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಹಾಗೂ ಗಾರ್ಮೆಂಟ್ ತಯಾರಿಕ ಘಟಕಗಳು ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇವುಗಳ ಮೇಲೆ ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎ.ಪಿ.ಎಂ.ಸಿ, ರೇಷ್ಮೆ ಮಾರುಕಟ್ಟೆ ಹಾಗೂ ಸಂತೆಗಳಲ್ಲಿ ರಸ್ತೆಯಲ್ಲಿ ತೆರೆಯುವ ಅಂಗಡಿಗಳು 6 ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಕಾರ್ಯದರ್ಶಿಗಳಿಗೆ ನಿರ್ದೇಶನ ಮಾಡಲಾಗಿದೆ ಎಂದರು.