ರಾಮನಗರ: ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ರಾಮನಗರ ಜಿಲ್ಲಾಡಳಿತ ಮನವಿ ಮಾಡಿದೆ.
ಕಣ್ವ ಹಾಗು ಮಂಚನಬೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟವನ್ನು ತಲುಪಿರುತ್ತದೆ. ಜಲಾಶಯದ ಸುರಕ್ಷತೆಯ ಹಿತ ದೃಷ್ಟಿಯಿಂದ ಸಾವಿರಾರು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆಯ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚುವರಿಯಾಗಿ ನೀರನ್ನು ಬಿಡುವ ಸಾಧ್ಯತೆಯಿರುತ್ತದೆ.
ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳ ಜನರು ನದಿಯನ್ನು ದಾಟುವುದಾಗಲೀ ಮತ್ತು ತಮ್ಮ ಜಾನುವಾರುಗಳನ್ನು ನದಿಗೆ ಬಿಡುವುದಾಗಲೀ ಮಾಡಬಾರದು. ಚನ್ನಪಟ್ಟಣ ಹಾಗು ರಾಮನಗರ ನಗರ ವ್ಯಾಪ್ತಿಯಲ್ಲಿ ನದಿ ದಂಡೆಯಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಗೌಡ ಮನವಿ ಮಾಡಿದ್ದಾರೆ.
ಮಂಚನಬೆಲೆ ಜಲಾಶಯದ ಮೇಲ್ಬಾಗದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಪುನರುಜ್ಜೀವನ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ನೀರು ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅರ್ಕಾವತಿ ಹಾಗು ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಈ ನದಿ ಪಾತ್ರಗಳಲ್ಲಿ ಪ್ರವಾಹ ಹೆಚ್ಚಾಗುತ್ತಿದೆ.