ರಾಮನಗರ :ರಾಮನಗರದ ರೇಷ್ಮೆ ಮಾರ್ಕೆಟ್ ಸ್ಥಳಾಂತರದ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ರಾಜಕೀಯವಾಗಿ ವಾಕ್ಸಮರ ಏರ್ಪಡ್ತಿದೆ. ಚನ್ನಪಟ್ಟಣದಲ್ಲಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾಗಲಿದೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಹೆಚ್ಡಿಕೆ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಆದರೆ, ಡಿಸಿಎಂ ಅಶ್ವತ್ಥ್ ನಾರಾಯಣ ಹೆಚ್ಡಿಕೆ ಪರ ಬ್ಯಾಟಿಂಗ್ ಮಾಡಿ ಹೈಟೆಕ್ ಮಾರ್ಕೆಟ್ ಚನ್ನಪಟ್ಟಣದಲ್ಲೇ ಆಗಲಿದೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ರಾಮನಗರ ರೇಷ್ಮೆ ಮಾರ್ಕೆಟ್ ಈಗ ಕಿರಿದಾಗಿದೆ.
ಅದನ್ನ ಮೇಲ್ದರ್ಜೆಗೇರಿಸಿ ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ಪಿಟಿಎಸ್ನಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೈಟೆಕ್ ಮಾರ್ಕೆಟ್ ನಿರ್ಮಾಣ ಮಾಡಬೇಕೆಂದು ಹೆಚ್ಡಿಕೆ ಯೋಜನೆ ರೂಪಿಸಿದ್ದರು. ರಾಜ್ಯ ಸರ್ಕಾರ ಈಗ ಯೋಜನೆಗೆ ಗ್ರೀನ್ ಸಿಗ್ನಲ್ ಸಹ ಕೊಟ್ಟಿದೆ.
ಆದರೆ, ಈ ಯೋಜನೆಗೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಮನಗರದ ಖಾಸಗಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಆಗಮಿಸಿದ್ದ ವೇಳೆ ಮಾತನಾಡಿ, ನಗರ ಪ್ರದೇಶದಲ್ಲಿ ರೇಷ್ಮೆ ಮಾರುಕಟ್ಟೆ ಮಾಡಬೇಕೆಂಬ ಆಲೋಚನೆ ಇತ್ತು.
ಆದರೆ, ಜಾಗ ಇಲ್ಲದ ಕಾರಣ ಮಾರುಕಟ್ಟೆಯನ್ನ ವಿಸ್ತರಣೆ ಮಾಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಮಾರುಕಟ್ಟೆಯನ್ನ ಹೈಟೆಕ್ ಮಾರುಕಟ್ಟೆಯಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ರೇಷ್ಮೆ ಮಾರುಕಟ್ಟೆ ಕುರಿತು ನಾಯಕರಲ್ಲೇ ಪರ-ವಿರೋಧ ನಮ್ಮ ಸರ್ಕಾರದ ವತಿಯಿಂದ ಇದೀಗ ನಿಗದಿ ಮಾಡಿರುವ ಚನ್ನಪಟ್ಟಣದಲ್ಲಿ ಮಾರುಕಟ್ಟೆ ನಿರ್ಮಾಣವಾಗುತ್ತದೆ. ರಾಮನಗರದಲ್ಲಿ ಜಾಗ ಇಲ್ಲದ ಕಾರಣ ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ, ಜನರಿಗೆ ಒಳ್ಳೆಯದಾಗಬೇಕು ಅಷ್ಟೇ, ಇಲ್ಲಿ ವ್ಯಾಪಾರಿಗಳ ದೃಷ್ಟಿಯಲ್ಲ, ರೈತರ ಹಿತದೃಷ್ಟಿಯಿಂದ ಈ ಅಭಿವೃದ್ಧಿ ಅಷ್ಟೇ ಎಂದು ಖಡಕ್ ಆಗಿ ತಿಳಿಸಿದರು.
ಇದೇ ವಿಚಾರವಾಗಿ ಮಾಗಡಿ ಶಾಸಕ ಎ.ಮಂಜು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾಗಬೇಕು. ಈಗಿರುವ ಮಾರ್ಕೆಟ್ 2 ಎಕರೆಯಲ್ಲಿದೆ. ಆದರೆ, ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾದರೆ ರೈತರಿಗೆ ಅನುಕೂಲ. ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಗೂಡು ಬರುತ್ತಿದೆ. ರೈತರ ಹಿತಕ್ಕಾಗಿ ಹೈಟೆಕ್ ಮಾರ್ಕೆಟ್ ನಿರ್ಮಾಣ ಮಾಡಲಾಗುತ್ತಿದೆ.
ಇದರಿಂದಾಗಿ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ, ರೈತರಿಗೆ ಅನುಕೂಲವಾಗಬೇಕಾದರೆ ಹೈಟೆಕ್ ಮಾರ್ಕೆಟ್ ಬೇಕಿದೆ. ಆದರೆ, ಇದನ್ನೇ ಕೆಲವರು ರಾಜಕೀಯಕ್ಕಾಗಿ ಬಳಸಿಕೊಳ್ತಿದ್ದಾರೆ. ಚನ್ನಪಟ್ಟಣದಲ್ಲಿ ಮಾರ್ಕೆಟ್ ನಿರ್ಮಾಣವಾದರೂ ಸಹ ರಾಮನಗರ ರೇಷ್ಮೆ ಹೈಟೆಕ್ ಮಾರ್ಕೆಟ್ ಎಂದೇ ಹೆಸರಿಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಕೆ.ಶೇಷಾದ್ರಿ ಈ ಕುರಿತು ಮಾತನಾಡಿ, ರಾಮನಗರ ಬಂದ್ಗೂ ಹಿಂದಿನ ದಿನ ಹೋರಾಟ ಮಾಡುತ್ತಿರುವವರು 420ಗಳು. ಕುಮಾರಸ್ವಾಮಿ ಒಬ್ಬ ಗೋಮುಖವ್ಯಾಘ್ರ, ನಯವಂಚಕ, ಮತಿಹೀನ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗ ಒಬ್ಬ ಕಾರ್ಯಕರ್ತನಿಗೂ ಅಧಿಕಾರ ಕೊಡಲಿಲ್ಲ. ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಕೈಮುಗಿದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ರೇಷ್ಮೆ ಮಾರುಕಟ್ಟೆ ಸ್ಥಳಾಂತರಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ : ಡಿಸಿಎಂ ಅಶ್ವತ್ಥ್ ನಾರಾಯಣ