ರಾಮನಗರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಸವನಪುರ ಬಳಿ ಅಂಡರ್ ಪಾಸ್ನಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಗಿದೆ. ಹೆದ್ದಾರಿ ನಿರ್ಮಾಣ ವೇಳೆ ಸ್ವಾಭಾವಿಕ ಹಳ್ಳ ( ನ್ಯಾಚುರಲ್ ವ್ಯಾಲಿ)ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅವೈಜ್ಞಾನಿಕವಾಗಿ ಮುಚ್ಚಿರುವ ಪರಿಣಾಮ ಮಳೆ ನೀರು ನೇರವಾಗಿ ಅಂಡರ್‌ಪಾಸ್ ಬರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಹಾದು ಹೋಗುವ ರಸ್ತೆಯ ಅಂಡರ್ ಪಾಸ್ಗಳಾದ ಶೇಷಗಿರಿಹಳ್ಳಿ, ತಮ್ಮಣ್ಣನದೊಡ್ಡಿ, ಕೆಂಪನಹಳ್ಳಿ, ದ್ಯಾವರಸೇಗೌಡನದೊಡ್ಡಿ ಹಾಗೂ ಬಿಳಗುಂಬ ಅಂಡರ್ ಪಾಸ್ಗಳಲ್ಲೂ ಇದೇ ಅವ್ಯವಸ್ಥೆ ಅನಾವರಣವಾಗಿದೆ. ಬಿಳಗುಂಬ ದಿಂದ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆಯು ಸಂಪೂರ್ಣ ಜಲಾವೃತವಾಗಿದೆ. ನೀರು ಸರಾಗವಾಗಿ ಹರಿಯದೇ ನಿಂತಲ್ಲಿ ನಿಂತು ವಾಹನ ಸವಾರರು ಪರದಾಡಿದ್ದಾರೆ. ಶೀಘ್ರವೇ ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.